ನವದೆಹಲಿ, ಅ. 21 (DaijiworldNews/TA): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇಶದ ನಾಗರಿಕರಿಗೆ ಪತ್ರ ಬರೆದು, ಭದ್ರತಾ ಕಾರ್ಯಗಳಲ್ಲಿ ಭಾರತವು ಸದಾಚಾರ ಮತ್ತು ಧರ್ಮವನ್ನು ಎತ್ತಿಹಿಡಿದಿರುವುದಲ್ಲದೆ, ಅನ್ಯಾಯದ ವಿರುದ್ಧ ಧೈರ್ಯದಿಂದ ಪ್ರತೀಕಾರ ತೀರಿಸಿಕೊಂಡಿದೆ ಎಂದು ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸಿದ ಮೋದಿ, “ಇದು ಧರ್ಮದ ರಕ್ಷಣೆಗಾಗಿ ನಾವು ತೆಗೆದುಕೊಂಡ ಪ್ರತಿ ಕ್ರಮಕ್ಕೂ ಸ್ಪಷ್ಟವಾದ ಉದಾಹರಣೆ,” ಎಂದರು. ಜಾಗತಿಕ ಸಂಘರ್ಷಗಳ ನಡುವೆಯೂ ಭಾರತವು ಸ್ಥಿರತೆ ಮತ್ತು ಸೂಕ್ಷ್ಮತೆಯ ಸಂಕೇತವಾಗಿ ಹೊರಹೊಮ್ಮುತ್ತಿದೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.


ಪ್ರಧಾನಿ ಮೋದಿ ಅವರು ಈ ವರ್ಷದ ದೀಪಾವಳಿಯನ್ನು ಮತ್ತೊಂದು ವಿಶೇಷ ಸಂದರ್ಭದಲ್ಲಿ ಆಚರಿಸಲಾಗುತ್ತಿದೆ ಎಂದು ಬಣ್ಣಿಸಿದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಬಳಿಕದ ಎರಡನೇ ದೀಪಾವಳಿ ಇದಾಗಿದೆ. “ಶ್ರೀರಾಮನು ನಮಗೆ ಧರ್ಮವನ್ನು ಅನುಸರಿಸುವ ಹಾಗೂ ಅನ್ಯಾಯದ ವಿರುದ್ಧ ಹೋರಾಡುವ ಪಾಠವನ್ನು ಕಲಿಸುತ್ತಾನೆ,” ಎಂದ ಅವರು, ಆಪರೇಷನ್ ಸಿಂಧೂರ್ನ ಕಾರ್ಯಾಚರಣೆಯು ಇದೇ ಪಾಠದ ನೈಜ ರೂಪವಾಗಿದೆ ಎಂದರು.
ಈ ದೀಪಾವಳಿಯ ಮತ್ತೊಂದು ವೈಶಿಷ್ಟ್ಯವೆಂದರೆ ನಕ್ಸಲಿಸಂ ನಿರ್ಮೂಲನೆ. ಪ್ರಧಾನಿಯವರು ಈ ಕುರಿತು ಮಾತನಾಡುತ್ತಾ, “ಈ ವರ್ಷ, ನಕ್ಸಲ್ಪೀಡಿತ ಪ್ರದೇಶಗಳಾದ ಅನೇಕ ಜಿಲ್ಲೆಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತಿದೆ. ಇದು ನಕ್ಸಲಿಸಂ ಮತ್ತು ಮಾವೋವಾದದ ವಿರುದ್ಧದ ಹೋರಾಟದಲ್ಲಿ ಭಾರತದ ಮಹತ್ತ್ವದ ಸಾಧನೆ,” ಎಂದು ಹೇಳಿದರು. ಹಲವರು ಈಗ ಹಿಂಸಾಚಾರದ ಹಾದಿಯನ್ನು ತ್ಯಜಿಸಿ ಸಂವಿಧಾನದಲ್ಲಿ ನಂಬಿಕೆ ಇಟ್ಟು, ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರುತ್ತಿದ್ದಾರೆ ಎಂಬುದನ್ನು ಅವರು ಪ್ರಸ್ತಾಪಿಸಿದರು.
ಇದೇ ವೇಳೆ, ದೇಶದ ಆರ್ಥಿಕ ಉನ್ನತಿಗೆ ದಾರಿಯಾಗುತ್ತಿರುವ ಸುಧಾರಣೆಗಳನ್ನು ಮತ್ತು ಜಿಎಸ್ಟಿ ವಿನ್ಯಾಸದಲ್ಲಿ ತರಲಾದ ಬದಲಾವಣೆಗಳನ್ನು ಅವರು ವಿಶ್ಲೇಷಿಸಿದರು. ಆತ್ಮನಿರ್ಭರ ಭಾರತದ ತಾತ್ಪರ್ಯವನ್ನು ವಿವರಿಸುತ್ತಾ, “ನಾವು ರಾಷ್ಟ್ರದ ಪ್ರತಿಯೊಬ್ಬ ನಾಗರಿಕರೂ ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕು, ಎಲ್ಲ ಭಾಷೆಗಳಿಗೆ ಗೌರವ ನೀಡಬೇಕು, ಸ್ವಚ್ಛತೆ ಕಾಯ್ದುಕೊಳ್ಳಬೇಕು, ಆರೋಗ್ಯವನ್ನು ಪ್ರಥಮ ಗುರಿಯಾಗಿಸಬೇಕು,” ಎಂದು ಮನವಿ ಮಾಡಿದರು. ಅವರು ಆಹಾರದಲ್ಲಿ ಎಣ್ಣೆ ಬಳಕೆಯನ್ನು ಶೇ.10 ರಷ್ಟು ಕಡಿಮೆ ಮಾಡುವ ಬಗ್ಗೆ ಸಲಹೆ ನೀಡಿದರೆ, ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪತ್ರದ ಅಂತ್ಯದಲ್ಲಿ, “ಒಂದು ದೀಪ ಇನ್ನೊಂದು ದೀಪವನ್ನು ಬೆಳಗಿದಾಗ ತನ್ನ ಬೆಳಕು ಕಳೆದುಕೊಳ್ಳುವುದಿಲ್ಲ ,ಬದಲಿಗೆ ಇನ್ನಷ್ಟು ಪ್ರಕಾಶಮಾನವಾಗುತ್ತದೆ. ಇದೇ ರೀತಿಯ ಮನೋಭಾವದಿಂದ, ನಾವು ಸಹಜವಾಗಿ ಒಟ್ಟಾಗಿ ಬೆಳಗಬೇಕು, ಸಮಾಜದಲ್ಲಿ ಸಹಕಾರ, ಸಾಮರಸ್ಯ ಮತ್ತು ಸಕಾರಾತ್ಮಕತೆಯ ಬೆಳಕು ಹರಡಬೇಕು,” ಎಂದು ಪ್ರಧಾನಿ ಮೋದಿ ಕರೆ ನೀಡಿದರು.