ಪಂಜಾಬ್, ಅ. 21 (DaijiworldNews/AA): ಐಪಿಎಸ್ ಮೀರಾ ಬೋರ್ವಾಂಕರ್ ಖಡಕ್ ಪೊಲೀಸ್ ಅಧಿಕಾರಿಯಾಗಿರುವ ಇವರು ಐಪಿಎಸ್ ಆಗಬೇಕು ಎಂದು ಕನಸು ಕಾಣುವ ಹೆಣ್ಣುಮಕ್ಕಳಿಗೆ ನಿಜಕ್ಕೂ ಸ್ಪೂರ್ತಿ ಅಂತಲೇ ಹೇಳಬಹುದು. ಮಹಾರಾಷ್ಟ್ರದ ಸಮರ್ಥ ಅಧಿಕಾರಿಗಳಲ್ಲಿ ಐಪಿಎಸ್ ಮೀರಾ ಬೋರ್ವಾಂಕರ್ ಅವರ ಹೆಸರು ಕೇಳಿದ್ರೆ ಭೂಗತ ಲೋಕದ ಡಾನ್ ಗಳು ಸಹ ಭಯಪಡುತ್ತಿದ್ದರು. ಐಪಿಎಸ್ ಮೀರಾ ಬೋರ್ವಾಂಕರ್ ಅವರ ಯಶಸ್ಸಿನ ಕಥೆಯನ್ನು ತಿಳಿಯೋಣ.

ಮೀರಾ ಅವರು ದೇಶಾದ್ಯಂತ 'ಸೂಪರ್ಕಾಪ್' ಎಂದು ಪ್ರಸಿದ್ಧರಾಗಿದ್ದಾರೆ. ಇವರನ್ನು 'ಲೇಡಿ ಸಿಂಗಮ್' ಎಂದೂ ಕರೆಯುತ್ತಾರೆ. ಮೀರಾ ಅವರು ಪಂಜಾಬ್ ನ ಫಾಜಿಲ್ಕಾ ಜಿಲ್ಲೆಯ ನಿವಾಸಿ. ಅವರು 1981 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ನಿವೃತ್ತರಾಗಿದ್ದಾರೆ. ಮಾಜಿ ಐಪಿಎಸ್ ಕಿರಣ್ ಬೇಡಿ ಅವರಿಂದ ಸ್ಫೂರ್ತಿ ಪಡೆದ ಮೀರಾ ಅವರು ಭಾರತೀಯ ಆಡಳಿತ ಸೇವೆಯೊಂದಿಗೆ ಬಂದರು. ಇವರ ಪತಿ ಅಭಯ್ ಬೋರ್ವಾಂಕರ್ ಅವರು ಭಾರತೀಯ ಆಡಳಿತ ಸೇವೆಯ ಅಧಿಕಾರಿಯಾಗಿದ್ದರು. ಮೀರಾ ಬೋರ್ವಾಂಕರ್ ಅವರು ಐಪಿಎಸ್ ಹುದ್ದೆಯನ್ನು ಸ್ವೀಕರಿಸಿದ ನಂತರ ಮಹಾರಾಷ್ಟ್ರ ಕೇಡರ್ನಲ್ಲಿ ಪೋಸ್ಟಿಂಗ್ ಪಡೆದರು.
ಮುಂಬೈನಲ್ಲಿ ಮಾಫಿಯಾ ರಾಜ್ ಕೊನೆಗೊಳ್ಳುವಲ್ಲಿ ಮೀರಾ ಪ್ರಮುಖ ಪಾತ್ರ ವಹಿಸಿದ್ದಾರೆ. ದಾವೂದ್ ಇಬ್ರಾಹಿಂ ಕಸ್ಕರ್ ಮತ್ತು ಛೋಟಾ ರಾಜನ್ ಗ್ಯಾಂಗ್ ನ ಅನೇಕ ಸದಸ್ಯರನ್ನು ಕಂಬಿ ಹಿಂದೆ ಹಾಕುವ ಮೂಲಕ, ಅವರು ಭೂಗತ ಪಾತಕಿಗಳಲ್ಲಿ ನಡುಕ ಹುಟ್ಟಿಸಿದ್ದರು. ಮುಂಬೈ ಸ್ಫೋಟದ ಅಪರಾಧಿ ಅಜ್ಮಲ್ ಕಸಬ್ ಮತ್ತು 1993 ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನನ್ನು ಮೀರಾ ಮೇಲ್ವಿಚಾರಣೆಯಲ್ಲಿ ಗಲ್ಲಿಗೇರಿಸಲಾಯಿತು.
1994 ರಲ್ಲಿ ಮೀರಾ ಅವರು ಮಹಾರಾಷ್ಟ್ರದ ಜಲಗಾಂವ್ ನಲ್ಲಿ ದೊಡ್ಡ ಸೆಕ್ಸ್ ರಾಕೆಟ್ ಅನ್ನು ಹಿಡಿದಿದ್ದರು. ಇದರಲ್ಲಿ ಶಾಲಾ ವಿದ್ಯಾರ್ಥಿನಿಯರು, ಕಾಲೇಜು ವಿದ್ಯಾರ್ಥಿನಿಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಮಾತುಗಳು ಕೇಳಿ ಬಂದಿದ್ದವು. ಇಂತಹ ಖಡಕ್ ಪೊಲೀಸ್ ಅಧಿಕಾರಿಯಾಗುವ ಮೂಲಕ ಮೀರಾ ಎಲ್ಲರಿಗೂ ಸ್ಪೂರ್ತಿಯಾಗಿದ್ದರು.
ಅಲ್ಲದೇ ರಾಣಿ ಮುಖರ್ಜಿ ಅಭಿನಯದ ಚಿತ್ರ 'ಮರ್ದಾನಿ' ಐಪಿಎಸ್ ಮೀರಾ ಬೋರ್ವಾಂಕರ್ ಅವರ ಜೀವನದಿಂದ ಪ್ರೇರಿತವಾಗಿದೆ. ರಾಣಿ ಮುಖರ್ಜಿ ಅವರು ತಮ್ಮ ಪಾತ್ರವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಐಪಿಎಸ್ ಅಧಿಕಾರಿಯನ್ನು ಹಲವಾರು ಬಾರಿ ಭೇಟಿಯಾಗಿದ್ದರು. ಮೀರಾ ಬೋರವಾಂಕರ್ ಅವರಿಗೆ ಹಲವು ಪ್ರಶಸ್ತಿಗಳು ಬಂದಿವೆ.