ಅಹಮದಾಬಾದ್, ಅ. 16 (DaijiworldNews/TA): ಗುಜರಾತ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರನ್ನು ಹೊರತುಪಡಿಸಿ ಅವರ ಸಂಪುಟದಲ್ಲಿದ್ದ ಎಲ್ಲಾ 16 ಸಚಿವರು ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ನಾಳೆ ಮಧ್ಯಾಹ್ನ 12.39ಕ್ಕೆ ಹೊಸ ಸಚಿವ ಸಂಪುಟದ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

ಹೊಸ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸುಮಾರು 10 ಹೊಸ ಮುಖಗಳು ಸಚಿವ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಪ್ರಸ್ತುತ ಸಂಪುಟದಲ್ಲಿದ್ದ ಕೆಲವು ಹಿರಿಯ ನಾಯಕರನ್ನು ಬದಲಾಯಿಸಲಾಗಬಹುದು ಎಂಬ ಸೂಚನೆ ಕೂಡ ಬಂದಿದೆ. ಇದರೊಂದಿಗೆ, ಸಂಪುಟದ ಅರ್ಧದಷ್ಟು ಸದಸ್ಯರು ಬದಲಾಗುವ ನಿರೀಕ್ಷೆಯೂ ಇದೆ.
ಸದ್ಯದ ಸಚಿವ ಸಂಪುಟದಲ್ಲಿ ಭೂಪೇಂದ್ರ ಪಟೇಲ್ ಸೇರಿದಂತೆ 17 ಮಂದಿ ಇದ್ದರು. ಇವರಲ್ಲಿ 8 ಮಂದಿ ಕ್ಯಾಬಿನೆಟ್ ಮಟ್ಟದ ಸಚಿವರಾಗಿದ್ದು, ಉಳಿದವರು ರಾಜ್ಯ ಸಚಿವರಾಗಿದ್ದಾರೆ. ಮುಖ್ಯಮಂತ್ರಿ ಪಟೇಲ್ ಅವರು ಇಂದು ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಭೇಟಿಯಾಗಿ ಹೊಸ ಸಂಪುಟ ರಚನೆಗೆ ಸಂಬಂಧಿಸಿದ ಸಲಹೆಗಳನ್ನು ನೀಡಲಿದ್ದಾರೆ. ಭೂಪೇಂದ್ರ ಪಟೇಲ್ ಅವರು ಮೊದಲ ಬಾರಿಗೆ 2021ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದು, ಡಿಸೆಂಬರ್ 12, 2022ರಂದು ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು.