ಮೈಸೂರು, ಅ. 10 (DaijiworldNews/TA): ದಸರಾ ಹಬ್ಬದ ಸಂಭ್ರಮ ಮುಗಿದರೂ, ನಗರದಲ್ಲಿ ಇನ್ನೂ ಹಬ್ಬದ ವಾತಾವರಣ ಮುಂದುವರಿದಿದೆ. ಆದರೆ ಕಳೆದ ಕೆಲವು ದಿನಗಳಲ್ಲಿ ಮೈಸೂರಿನಲ್ಲಿ ಸಂಭವಿಸಿರುವ ಗಂಭೀರ ಘಟನೆಗಳು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಗಂಭೀರ ಚಿಂತನೆಗೆ ದಾರಿ ಮಾಡಿಕೊಟ್ಟಿವೆ. ಇತಿಹಾಸದಲ್ಲೇ ಶಾಂತಿ, ಶಿಸ್ತು ಮತ್ತು ಉತ್ತಮ ಆಡಳಿತದ ನಿದರ್ಶನವೆನಿಸಿಕೊಂಡಿರುವ ಮೈಸೂರು ನಗರ ಇಂದು ಅಪರಾಧ ಹಾಗೂ ಅಶಾಂತಿಯ ವಿಚಾರಗಳಲ್ಲಿ ಹೆಸರಾಗುತ್ತಿರುವುದು ವಿಷಾದಕರ ಎಂದು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮೈಸೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿಯುತ್ತಿದೆ. ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟದ ಪ್ರಕರಣ, ನಂತರ 340 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿರುವ ಘಟನೆ, ಮಹಾರಾಷ್ಟ್ರ ಪೊಲೀಸರು ನಿರ್ವಹಿಸಿದ್ದು, ಕರ್ನಾಟಕದ ಕಾನೂನು ವ್ಯವಸ್ಥೆಯ ದುರ್ಬಲತೆಯನ್ನು ಎತ್ತಿಹಿಡಿಯುತ್ತದೆ,” ಎಂದು ಟೀಕಿಸಿದರು. ಮತ್ತೊಂದು ಹೃದಯವಿದ್ರಾವಕ ಘಟನೆ ಎಂದರೆ ಅರಮನೆ ಹತ್ತಿರ ನಡೆದ ಕೊಲೆ ಮತ್ತು ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ. ಬಲೂನ್ ಮಾರುವ ಆ ಪುಟ್ಟ ಬಾಲಕಿಯ ಮೇಲೆ ನಡೆದ ಕ್ರೂರತೆ ಮೈಸೂರು ಇತಿಹಾಸದಲ್ಲೇ ಕಂಡಿಲ್ಲ. ನಗರದ ಹೃದಯಭಾಗದಲ್ಲೇ ಇಂತಹ ದಾರುಣ ಘಟನೆಗಳು ಸಂಭವಿಸುತ್ತಿರುವುದು, ಇಲ್ಲಿ ಭದ್ರತೆ ಎನ್ನುವುದು ಕೇವಲ ಹೆಸರಿನಲ್ಲೇ ಉಳಿದಿರುವುದನ್ನು ಸ್ಪಷ್ಟಪಡಿಸುತ್ತದೆ. “ಇದು ಕಾನೂನು ವ್ಯವಸ್ಥೆಯ ದೊಡ್ಡ ವಿಫಲತೆಯ ಸೂಚನೆ. ಕಿಡಿಗೇಡಿಗಳಿಗೆ ಯಾವುದೇ ಭಯವಿಲ್ಲದಂತಾಗಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಸಮಯದಲ್ಲಿ “ಮೈಸೂರು ನನ್ನ ತವರು” ಎಂದು ಘೋಷಿಸಿದ್ದನ್ನು ಉಲ್ಲೇಖಿಸಿದ ಯದುವೀರ್, “ಆದರೆ ತಮ್ಮ ತವರು ಊರಿನಲ್ಲೇ ಈ ರೀತಿಯ ಅನಾಗರಿಕತೆ ನಡೆಯುತ್ತಿದೆ ಎಂಬುದು ಸರಕಾರದ ಸಂಪೂರ್ಣ ನಿರ್ಲಕ್ಷ್ಯ ಮತ್ತು ಆಡಳಿತಾತ್ಮಕ ಅಸಮರ್ಥತೆಯನ್ನು ತೋರಿಸುತ್ತದೆ,” ಎಂದು ಕಿಡಿಕಾರಿದರು.
ದಸರಾ ಹಬ್ಬದ ಸಮಯದಲ್ಲಿಯೇ ಪಾಸ್ ಹಂಚಿಕೆ ಹಾಗೂ ಸೀಟು ವ್ಯವಸ್ಥೆಯಲ್ಲಿ ಕಂಡುಬಂದ ಗೊಂದಲದ ಕುರಿತೂ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಸಾಮಾನ್ಯ ಜನರಿಗೆ ಪಾಸ್ ನೀಡಿದರೂ, ಅರಮನೆ ಒಳಗೆ ಪ್ರವೇಶವಿಲ್ಲ. ಸೀಟು ವ್ಯವಸ್ಥೆ ಅತ್ಯಂತ ಕೆಳಮಟ್ಟದಲ್ಲಿತ್ತು. ಈ ಬಾರಿ ದಸರಾ ಜನರ ಹಬ್ಬವಾಗದೇ, ಕಾಂಗ್ರೆಸ್ ನಾಯಕರ ಹಬ್ಬವಾಗಿ ಮಾತ್ರ ಮಾರ್ಪಟ್ಟಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾಡಳಿತ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ,” ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ನೋಡಿದಾಗ, ಯದುವೀರ್ ಒಡೆಯರ್ ಅವರ ಟೀಕೆಗಳು ಕೇವಲ ರಾಜಕೀಯ ಪ್ರಹಸನವಲ್ಲ, ಆದರೆ ಜನಸಾಮಾನ್ಯರ ಆತಂಕಗಳ ಪ್ರತಿಧ್ವನಿಯಾಗಿವೆ. ಇಂತಹ ಸಂದರ್ಭಗಳಲ್ಲಿ ಸರ್ಕಾರ ತಕ್ಷಣವೇ ಕಾನೂನು ಸುವ್ಯವಸ್ಥೆ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ. ಮೈಸೂರಿನ ಮುನ್ನಡೆಗೆ ಈ ಸಮಸ್ಯೆಗಳು ಅಡ್ಡಿಯಾಗದಂತೆ ಆಡಳಿತ ಚುರುಕುಪಡುವ ಸಮಯ ಇದಾಗಿದೆ.