ಹಾಸನ, ಅ. 09(DaijiworldNews/ TA): ಭಕ್ತರ ಆತುರದ ನಿರೀಕ್ಷೆಗೆ ತೆರೆ ಇಳಿಸಿ, ಹಾಸನ ನಗರದ ಪ್ರಸಿದ್ಧ ಹಾಸನಾಂಬೆ ದೇಗುಲದ ಬಾಗಿಲು ಗುರುವಾರ ಸಾಂಪ್ರದಾಯಿಕ ಆಚರಣೆಗಳೊಂದಿಗೆ ತೆರೆಯಲಾಯಿತು. ವರ್ಷದಲ್ಲಿ ಕೇವಲ ಒಂದು ಬಾರಿ ಮಾತ್ರ ಭಕ್ತರಿಗೆ ದರ್ಶನ ಸಿಗುವ ಈ ದೇಗುಲದ ಬಾಗಿಲು ತೆರೆಯುವ ಕ್ಷಣವನ್ನು ಸಾಕ್ಷಾತ್ ದೈವೀಕ ಅನುಭವ ಎನ್ನಬಹುದಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ದರ್ಶನಕ್ಕಾಗಿ ಹಾಸನಕ್ಕೆ ಹರಿದು ಬರುತ್ತಿದ್ದಾರೆ.

ದೇವಳದ ಗರ್ಭಗುಡಿಯ ಬಾಗಿಲು ಪ್ರಾಚೀನ ಸಂಪ್ರದಾಯದಂತೆ ಪುಣ್ಯಹವಚನ, ವೇದಘೋಷ ಮತ್ತು ವಿಶೇಷ ಪೂಜಾ ಕೈಂಕರ್ಯಗಳ ಮೂಲಕ ತೆರೆಯಲಾಯಿತು. ಈ ಪವಿತ್ರ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಗಳು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಹಾಸನ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್, ಹಾಗೂ ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ಈ ವರ್ಷ ಅಕ್ಟೋಬರ್ 9ರಿಂದ 23ರವರೆಗೆ, ಕೊನೆಯ ಮೂರು ದಿನಗಳನ್ನು ಹೊರತುಪಡಿಸಿ, ಒಟ್ಟು 13 ದಿನಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ ಸುಮಾರು 20 ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದಿದ್ದು, ಈ ವರ್ಷ 25 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಹಾಸನಾಂಬೆ ದೇಗುಲವು ಧಾರ್ಮಿಕವಾಗಿ ಮಾತ್ರವಲ್ಲ, ಸಾಂಸ್ಕೃತಿಕವಾಗಿ ಸಹ ಕರ್ನಾಟಕದ ಪ್ರಮುಖ ಆಕರ್ಷಣೆಯಾಗಿದೆ. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನದ ಅವಕಾಶ ದೊರೆಯುವ ಈ ದೇವಾಲಯದಲ್ಲಿ ದರ್ಶನ ಪಡೆಯುವುದು ಭಕ್ತರ ಪಾಲಿಗೆ ಅಪರೂಪದ ಅವಕಾಶ ಎನ್ನಬಹುದು.