ನವದೆಹಲಿ, ಅ. 02 (DaijiworldNews/TA): ಮೋಹನ್ದಾಸ್ ಕರಮ್ಚಂದ ಗಾಂಧಿ, ಭಾರತೀಯ ಸ್ವಾತಂತ್ರ್ಯ ಹೋರಾಟದ ಅಜರಾಮರ ನಾಯಕ, ತಮ್ಮ ಸಂಪೂರ್ಣ ಜೀವನವನ್ನು ಸತ್ಯ ಮತ್ತು ಅಹಿಂಸೆಯ ತತ್ವಗಳ ಪಾಲನೆಗೆ ಮೀಸಲಾಗಿಟ್ಟಿದ್ದ ವ್ಯಕ್ತಿತ್ವ. ಅವರು ಯಾರಿಗೂ ಹಾನಿ ಮಾಡದೆ, ಹಿಂಸೆಯಿಲ್ಲದೆ ಬ್ರಿಟೀಷರನ್ನು ದೇಶದಿಂದ ಹೊರಹಾಕುವ ನಂಬಿಕೆಯಲ್ಲಿ ತನ್ನ ಹೋರಾಟವನ್ನು ನಡೆಸಿದರು. ಸತ್ಯಾಗ್ರಹ, ಅಹಿಂಸಾತ್ಮಕ ಚಳವಳಿಗಳು ಮತ್ತು ಪ್ರಜ್ವಲಿತ ಆದರ್ಶಗಳ ಮೂಲಕ ಅವರು ಜನಮನ ಗೆದ್ದರು. ಈ ಕಾರಣದಿಂದಲೇ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2 ಅನ್ನು ಪ್ರತಿ ವರ್ಷ ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ದಿನದ ಆಚರಣೆಯ ಹಿಂದಿನ ಇತಿಹಾಸವನ್ನೊಮ್ಮೆ ನೋಡಿದರೆ, ಅಹಿಂಸೆಯ ತತ್ವಗಳ ಮೂಲಕ ವಿಶ್ವದ ಶಾಂತಿ ಮತ್ತು ಸಾಮರಸ್ಯಕ್ಕಾಗಿ ತಮ್ಮನ್ನು ಅರ್ಪಿಸಿದ ಗಾಂಧಿಯವರ ಕೊಡುಗೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು 2007ರ ಜೂನ್ 15 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಸರ್ಕಾರ ಪ್ರಸ್ತಾಪ ಸಲ್ಲಿಸಿತು. ಈ ನಿರ್ಣಯಕ್ಕೆ 140ಕ್ಕೂ ಹೆಚ್ಚು ರಾಷ್ಟ್ರಗಳು ಬೆಂಬಲ ನೀಡಿದವು. ನಂತರ ವಿಶ್ವಸಂಸ್ಥೆ ಗಾಂಧೀಜಿಯವರ ಜನ್ಮದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವೆಂದು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಿಸಲಾಗುತ್ತಿದೆ.
ಅಹಿಂಸಾ ದಿನವನ್ನು ಆಚರಿಸುವ ಉದ್ದೇಶ, ಗಾಂಧಿಯವರ ಶ್ರೇಷ್ಠ ತತ್ವಗಳು, ಸತ್ಯ, ಅಹಿಂಸೆ, ಸಾಮರಸ್ಯ ಮತ್ತು ಮಾನವೀಯತೆ. ಇವುಗಳನ್ನು ವಿಶ್ವದಾದ್ಯಂತ ನೆನಪಿಸಲು ಮತ್ತು ಎಲ್ಲರ ಜೀವನದಲ್ಲಿ ಅಳವಡಿಸಲು ಪ್ರೇರಣೆಯುಳ್ಳ ಸಂದರ್ಭ ಒದಗಿಸುಸುವ ದಿನವಾಗಿದೆ. ಗಾಂಧಿಯವರ ದೃಷ್ಟಿಕೋಣ ಸ್ವಾತಂತ್ರ್ಯವನ್ನು ಪಡೆಯುವಲ್ಲಿ ಮಾತ್ರವಲ್ಲ, ಮಾನವ ಸಮುದಾಯದ ಸಾರ್ಥಕ ಬದುಕನ್ನು ಕಟ್ಟುವಲ್ಲಿ ಸಹ ಆಳವಾದ ಅರ್ಥವನ್ನು ಹೊಂದಿತ್ತು. ಅವರು ಹೋರಾಟದ ಮಾರ್ಗವಾಗಿ ಅಹಿಂಸೆಯನ್ನು ಆಯ್ಕೆ ಮಾಡಿದ್ದು ಕೇವಲ ರಾಜಕೀಯ ತಂತ್ರವಲ್ಲ, ಅದು ಅವರ ಆಂತರಿಕ ನಂಬಿಕೆಯನ್ನು ಪ್ರತಿಬಿಂಬಿಸುವ ತತ್ತ್ವವಾಗಿತ್ತು.
ಇಂದು ಅಹಿಂಸಾ ದಿನದ ಪ್ರಯುಕ್ತ, ನಾವು ಗಾಂಧಿಯವರ ಆದರ್ಶಗಳನ್ನು ಸ್ಮರಿಸಿ, ನಮ್ಮ ಬದುಕಿನಲ್ಲಿ ಸಹ ಶಾಂತಿ, ಸಹನೆ, ತಾಳ್ಮೆ ಮತ್ತು ಸತ್ಯವನ್ನೇ ಪ್ರಾಥಮಿಕತೆ ನೀಡಬೇಕಾಗಿದೆ. ಗಾಂಧಿಯವರು ಬೋಧಿಸಿದಂತಹ ಮೌಲ್ಯಗಳು ಇಂದು ಸಾಮಾಜಿಕ, ರಾಜಕೀಯ ಹಾಗೂ ವೈಯಕ್ತಿಕ ಜೀವನದಲ್ಲೂ ಹೆಚ್ಚು ಅಗತ್ಯವಿರುವುವು. ಈ ದಿನವು ಕೇವಲ ಗೌರವ ಸೂಚನೆಗಷ್ಟೇ ಅಲ್ಲ, ಆದರೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಬೇಕಾದ, ಅವರ ತತ್ವಗಳನ್ನು ಅನುಸರಿಸಬೇಕಾದ ಅವಕಾಶವೂ ಹೌದು.
ಅಕ್ಟೋಬರ್ 2, ಗಾಂಧಿ ಜಯಂತಿ ಮತ್ತು ಅಂತಾರಾಷ್ಟ್ರೀಯ ಅಹಿಂಸಾ ದಿನ, ಕೇವಲ ಒಂದು ವ್ಯಕ್ತಿಯ ಬದುಕಿನ ಸ್ಮರಣೆ ಅಲ್ಲ ಇದು ಜಗತ್ತಿಗೆ ಶಾಂತಿಯ ದಾರಿ ತೋರಿಸಿದ ಹಾದಿಯ ಶ್ರದ್ಧಾಂಜಲಿಯೂ ಹೌದು. ನಾವು ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕಾದ್ದು, ಅಹಿಂಸೆ ಮತ್ತು ಸತ್ಯದ ಬೆಳಕಿನಲ್ಲಿ ನಡೆದುಕೊಳ್ಳುವ ಸಂಕಲ್ಪ ಮಾಡಬೇಕಾದ್ದು ನಮ್ಮ ನೈತಿಕ ಹೊಣೆ.