ಕಲಬುರಗಿ,ಸೆ. 29 (DaijiworldNews/AK): ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಈಗಾಗಲೇ 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಂಟಿ ಸರ್ವೆ ನಡೆದಿದೆ. ಜಮೀನುಗಳಲ್ಲಿ ನೀರು ನಿಂತಿದ್ದರಿಂದ ಇನ್ನುಳಿದ ಜಂಟಿ ಸರ್ವೆ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಲಬುರಗಿ ಡಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ , ಭೀಮಾ ಪ್ರವಾಹದಿಂದ 3 ಜಿಲ್ಲೆಗಳ 117 ಗ್ರಾಮಗಳಲ್ಲಿ ತೊಂದರೆ ಆಗಿದೆ. ಪ್ರಾಥಮಿಕ ಅಂದಾಜಿನಂತೆ 9,60,578 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭೀಮಾ ಪ್ರವಾಹದಿಂದ ಬಹಳ ತೊಂದರೆ ಆಗಿದೆ. ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ 80 ಕಾಳಜಿ ಕೇಂದ್ರ ಓಪನ್ ಮಾಡಲಾಗಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಇಲ್ಲಿ ಆಶ್ರಯ ಪಡೆದಿದ್ದಾರೆ. ರಾಜ್ಯದಲ್ಲಿ ಮುಂಗಾರು ಮಳೆಗೆ 52 ಜನ ಬಲಿಯಾಗಿದ್ದು, ಈವರೆಗೆ ಮಳೆಯಿಂದ ಮೃತಪಟ್ಟ ಎಲ್ಲರಿಗೂ ಪರಿಹಾರ ಹಣ ನೀಡಲಾಗಿದೆ. 422 ಜಾನುವಾರಗಳು ಮೃತಪಟ್ಟಿದ್ದು, ಇದಕ್ಕೂ ಪರಿಹಾರ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರವಾಹದಿಂದ 547 ಮನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದ್ದು, 1.2 ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ. ಹಾನಿಯಾದ ಮನೆಗಳಿಗೆ ನೀಡಲು ಇಲ್ಲಿವರೆಗೆ 23 ಕೋಟಿ ಖರ್ಚು ಮಾಡಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.
ಅಲ್ಲದೆ, ಜಂಟಿ ಸರ್ವೆ ಮುಗಿದ ಬಳಿಕ ಬೆಳೆ ಹಾನಿಗೆ ಪರಿಹಾರ ನೀಡಲು ಸಿಎಂ ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು. NDRF ಮಾರ್ಗಸೂಚಿಯಂತೆ 1 ಹೆಕ್ಟೇರ್ ಖುಷ್ಕಿ ಜಮೀನಿಗೆ 8.5 ಸಾವಿರ, ನೀರಾವರಿಗೆ ಒಂದು ಹೆಕ್ಟೇರ್ಗೆ 17 ಸಾವಿರ ರೂ. ಪರಿಹಾರ ನೀಡಬೇಕಿದೆ. ಖುಷ್ಕಿ ಜಮೀನು ಮತ್ತು ನೀರಾವರಿಗೆ ಹೆಚ್ಚುವರಿಯಾಗಿ 8.5 ಸಾವಿರ ಕೊಡಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿರೋದಾಗಿ ಸಿಎಂ ತಿಳಿಸಿದ್ದಾರೆ.
ಸೇತುವೆ, ರಸ್ತೆ, ಬ್ಯಾರೇಜ್, ಶಾಲೆ, ಟ್ರಾನ್ಸ್ಫಾರ್ಮರ್ಗಳೂ ಮಳೆಯಿಂದ ಹಾಳಾಗಿವೆ. ಸಮೀಕ್ಷೆ ಮುಗಿದ ಬಳಿಕ ಇವುಗಳನ್ನ ದುರಸ್ತಿ ಮಾಡುತ್ತೇವೆ. ಕೇಂದ್ರ ಸರ್ಕಾರ ಸಹ ಪ್ರವಾಹಕ್ಕೆ ಸ್ಪಂದಿಸಬೇಕು. ಸರ್ವೆ ಮುಗಿದ ಬಳಿಕ ಹೆಚ್ಚು ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಿದ್ದು, ಪ್ರವಾಹದಿಂದ ಮನೆಗಳು ಮುಳುಗಿದ್ರೆ ತಕ್ಷಣವೇ 5 ಸಾವಿರ ನೀಡುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಸಿಎಂ ತಿಳಿಸಿದ್ದಾರೆ.