ಬೆಂಗಳೂರು,ಸೆ. 30 (DaijiworldNews/AK): ಬೆಳೆಹಾನಿಯಿಂದ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಪರಿಹಾರದ ಪ್ಯಾಕೇಜ್ ಪ್ರಕಟಿಸುವಂತೆ ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಆಗ್ರಹಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ತಂಡವು ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು ಪ್ರವಾಸ ಮಾಡುತ್ತಿದೆ. ಯಾವಾಗ ಬಿಜೆಪಿ ಪ್ರವಾಸ ಮಾಡಿತೋ, ಇನ್ನು ಕಾರಿನಲ್ಲಿ ಹೋಗಲಾಗದೆಂದು ಭಾವಿಸಿ, ವೈಮಾನಿಕ ಸಮೀಕ್ಷೆಯನ್ನು ಈ ಸರಕಾರ ಮಾಡುತ್ತಿದೆ. ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲಾ ಸಚಿವರಿಗೆ ಸಮಯವೇ ಇಲ್ಲ. ಅವರೂ ವೈಮಾನಿಕ ಸಮೀಕ್ಷೆ ಮಾಡುತ್ತಿದ್ದಾರೆ. ಇದು ರಾಜ್ಯದ ದುರಂತ ಪರಿಸ್ಥಿತಿ ಎಂದು ಟೀಕಿಸಿದರು.
ಅದ್ಯಾವ ರೈತರ ಬಳಿ ಮನವಿ ಸ್ವೀಕರಿಸುತ್ತಾರೋ, ಯಾವ ರೈತರನ್ನು ಭೇಟಿ ಮಾಡಿದ್ದಾರೋ ಗೊತ್ತಿಲ್ಲ. ಬಿಜೆಪಿ ಹಿಂದಿನಿಂದಲೂ ರೈತರ ಪರ ಇರುವ ಪಕ್ಷ. ನಾವು ನೇರವಾಗಿ ಭೇಟಿ ಮಾಡಿ ಅಹವಾಲು ಸ್ವೀಕರಿಸಿ, ಅವನ್ನು ಸರಕಾರಕ್ಕೆ ಕೊಡುತ್ತೇವೆ. ಆರ್.ಅಶೋಕ ಅವರ ತಂಡವು ಅ. 3 ಮತ್ತು 4ರಂದು ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಬಿಜಾಪುರಕ್ಕೆ ತೆರಳಲಿದೆ. ಬೆಳೆನಾಶದ ಅಧ್ಯಯನ ಮಾಡಲಿದ್ದಾರೆ ಎಂದು ಹೇಳಿದರು.
ಸರಕಾರ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ಆಕ್ಷೇಪಿಸಿ ಧಾರವಾಡದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನಿರುದ್ಯೋಗಿಗಳು ಹೋರಾಟ ಮಾಡಿದ್ದರು. ಯಾವುದೇ ಇಲಾಖೆ ನೋಡಿದರೂ ಹುದ್ದೆಗಳು ಖಾಲಿ ಇವೆ. ಇದರ ಪರಿಣಾಮವಾಗಿ ಸರಕಾರದ ವಿರುದ್ಧ ಹೋರಾಟ ನಡೆದಿದೆ. ಇವತ್ತು ಬಿಜಾಪುರದಲ್ಲೂ ಅಷ್ಟೇ ಪ್ರಮಾಣದಲ್ಲಿ ನಿರುದ್ಯೋಗಿ ಯುವಜನರು ಹೋರಾಟ ಮಾಡುತ್ತಿದ್ದಾರೆ. ಅವರ ಕಣ್ಣೊರೆಸುವ ತಂತ್ರವಾಗಿ ವಯಸ್ಸಿನ ಪರಿಮಿತಿಯನ್ನು 3 ವರ್ಷಕ್ಕೆ ಹೆಚ್ಚಿಸಿದ್ದಾರೆ; ಯುವಜನರು, ವಿದ್ಯಾರ್ಥಿಗಳು ಅದನ್ನು 5 ವರ್ಷಕ್ಕೆ ಏರಿಸಲು ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯಿಸಿದ್ದಾರೆ ಎಂದು ತಿಳಿಸಿದರು.
ಸರಕಾರವು ನಿರುದ್ಯೋಗಿ ಯುವಜನರ ಬೇಡಿಕೆಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು. ಇಲ್ಲವಾದರೆ ಕರ್ನಾಟಕದಲ್ಲಿ ಬಿಜೆಪಿಯ ಎಲ್ಲ ಶಾಸಕರು, ಸಂಸದರು ಸೇರಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪೂರ್ವತಯಾರಿ ಮಾಡಿ ಚೆನ್ನಾಗಿ ಸರ್ವೇ ಮಾಡಿ
ರಾಜ್ಯದಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವಿಕೆಯ ಸಮೀಕ್ಷೆಯನ್ನು ಸರಕಾರ ಮಾಡುತ್ತಿದೆ. ಕೆಇಬಿಯ ಯುಎಚ್ಐಡಿ ಸಂಖ್ಯೆ ಕೊಟ್ಟು, ಅದರ ಆಧಾರದಲ್ಲಿ ಶಿಕ್ಷಕರು ಮನೆಗಳಿಗೆ ಹೋಗುತ್ತಿದ್ದಾರೆ. ಆ ಶಿಕ್ಷಕರಿಗೆ ಹೋಗಬೇಕಾದ ಮನೆಗಳೇ ಸಿಗುತ್ತಿಲ್ಲ ಎಂದು ಗಮನ ಸೆಳೆದರು. ಅನೇಕ ಜನ ಶಿಕ್ಷಕರು ಬೇಸತ್ತು ಹೋಗಿದ್ದಾರೆ ಎಂದು ತಿಳಿಸಿದರು.