ಕಲಬುರ್ಗಿ, , ಸೆ. 30 (DaijiworldNews/AK):ಮೊದಲು ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬಕ್ಕೆ ಪರಿಹಾರ ಕೊಡಿ. ಜೊತೆಗೇ ರೈತರ ಸಂಕಷ್ಟಕ್ಕೂ ಸ್ಪಂದಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರೈತರೊಬ್ಬರು ಬೆಳೆ ನಾಶವಾಗಿದೆ. ತೊಗರಿ ಬೆಳೆ ನಾಶವಾಗಿದೆ. 4 ಎಕರೆಗೆ ಪರಿಹಾರ ಕೊಡಿಸಿ ಎಂದು ಕೇಳಿದರೆ, ನನ್ನದೇ 40 ಎಕರೆ ಇದೆ; ನನ್ನ ಬೆಳೆಯೂ ಸಂಪೂರ್ಣ ನಾಶವಾಗಿದೆ. ಪರಿಹಾರ ಬಂದಿಲ್ಲ ಎಂಬ ಮಾತು ಮಲ್ಲಿಕಾರ್ಜುನ ಖರ್ಗೆಯವರದು ಎಂದು ಆಕ್ಷೇಪಿಸಿದರು.
ಒಣಭೂಮಿಗೆ ಎನ್ಡಿಆರ್ಎಫ್ ನಿಯಮದಡಿ ಹೆಕ್ಟೇರ್ಗೆ 6 ಸಾವಿರ ರೂ. ಪರಿಹಾರ ಇತ್ತು. ಆದರೆ, ಮುಖ್ಯಮಂತ್ರಿಗಳಾಗಿದ್ದ ರೈತನಾಯಕ ಯಡಿಯೂರಪ್ಪ ಅವರು ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ಪ್ರವಾಹಪೀಡಿತರಿಗೆ ರಾಜ್ಯದಿಂದ ಎನ್ಡಿಆರ್ಎಫ್ ಮಾದರಿಯ ನೆರವು ನೀಡಿದ್ದರು. ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪ ಮಾಡುತ್ತಿಲ್ಲ; ಆ ಕಾಳಜಿ ವ್ಯಕ್ತವಾಗಲಿ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಸಂದಿಗ್ಧ ಪರಿಸ್ಥಿತಿಯಲ್ಲಿರುವ ರೈತರ ಬಗ್ಗೆ ಈಗ ನೀವು ಕಾಳಜಿ ತೋರಿಸದೇ ಇದ್ದರೆ ಇನ್ಯಾವಾಗ ಕಾಳಜಿ ತೋರಿಸುತ್ತೀರಿ ಎಂದು ಪ್ರಶ್ನಿಸಿದರು.
ಎಕರೆಗೆ 25ರಿಂದ 30 ಸಾವಿರ ರೂ. ಪರಿಹಾರ ಕೊಡಬೇಕೆಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಹಿಂದೂ ಸಮಾಜ ಒಡೆಯಲು ಹೊರಟಿದ್ದಾರೆ. ಜಾತಿ ಸಮೀಕ್ಷೆ ಕುರಿತು ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ಮುಖ್ಯಮಂತ್ರಿಗಳು ನಿನ್ನೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕೇಂದ್ರ ಸರಕಾರದ ಜಾತಿ ಸಮೀಕ್ಷೆಯನ್ನೂ ವಿರೋಧಿಸುತ್ತೀರಾ ಎಂದು ಕೇಳಿದ್ದಾರೆ.
ಕಾಂತರಾಜು ವರದಿಗೆ 180 ಕೋಟಿ ಖರ್ಚು ಮಾಡಿದ್ದೀರಲ್ಲವೇ? ನೀವೇ ಮುಖ್ಯಮಂತ್ರಿ ಇದ್ದರೂ ಅದನ್ನು ಅನುಷ್ಠಾನ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದರು. ಇವತ್ತು 500- 600 ಕೋಟಿ ಖರ್ಚು ಮಾಡಿ ಸಮೀಕ್ಷೆ ಮಾಡುವುದನ್ನು ಬಿಜೆಪಿ ವಿರೋಧಿಸಲು ಹೊರಟಿಲ್ಲ. ಸ್ವಾತಂತ್ರ್ಯಾನಂತರದಲ್ಲಿ ಹಿಂದಿನ ಕಾಂಗ್ರೆಸ್, ಯುಪಿಎ ಸರಕಾರವು ಜಾತಿ ಗಣತಿ ಕುರಿತು ಇಂಥ ದಿಟ್ಟ ನಿರ್ಧಾರ ಮಾಡಿರಲಿಲ್ಲ. ಮನಮೋಹನ್ ಸಿಂಗ್ ಅವರ ಸರಕಾರ ತೀರ್ಮಾನ ಮಾಡಿದರೂ ರಾಹುಲ್ ಗಾಂದಿಯವರು ಅದನ್ನು ವಿರೋಧಿಸಿದ್ದರು ಎಂದು ಗಮನ ಸೆಳೆದರು.
ರಾಜ್ಯ ಸರಕಾರವು ಜಾತಿ ಜನಗಣತಿ ನೆಪದಲ್ಲಿ ಪಗಡೆಯಾಟ ಮಾಡಲು ಹೊರಟಿದೆ. ಹಿಂದೂ ಸಮಾಜ ಒಡೆಯಲು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.