ಚೆನ್ನೈ, ಸೆ. 30 (DaijiworldNews/AA): ತಮಿಳುನಾಡಿನ ಕರೂರಿನಲ್ಲಿ ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆ ನಾಯಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಕರೂರ್ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ಮತಿಯಜಗನ್ನನ್ನು ಪೊಲೀಸರು ಬಂಧಿಸಿದ್ದಾರೆ. ದುರಂತಕ್ಕೆ ಕಾರಣವಾದ ಲೋಪಗಳಿಗೆ ಅವರೇ ಹೊಣೆಗಾರರ ಎನ್ನಲಾಗಿದೆ.
ಈ ಹಿಂದೆ ಆತನ ವಿರುದ್ಧ ಕೊಲೆ ಯತ್ನ, ಕೊಲೆಗೆ ಸಮನಾದ ಅಪರಾಧಿಕ ನರಹತ್ಯೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಟಿವಿಕೆ ಪ್ರಧಾನ ಕಾರ್ಯದರ್ಶಿ ಬಸ್ಸಿ ಆನಂದ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಶೇಖರ್ ವಿರುದ್ಧವೂ ಪ್ರಕರಣಗಳು ದಾಖಲಿಸಲಾಗಿವೆ.
ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಸಲ್ಲಿಸಲಾದ ಎಫ್ಐಆರ್ ಪ್ರಕಾರ, ಗೊಂದಲದ ಸಮಯದಲ್ಲಿ ಒಂದು ಹಂತದಲ್ಲಿ 11 ಜನರ ಸಾವಿಗೆ ಕಾರಣವಾದ ಉದ್ದೇಶಪೂರ್ವಕ ಕೃತ್ಯಗಳಿಗೆ ವಿಜಯ್ ಅವರನ್ನೇ ಹೆಸರಿಸಲಾಗಿದೆ. ರಾಜಕೀಯ ಶಕ್ತಿಯನ್ನು ಪ್ರದರ್ಶಿಸಲು ಜಿಲ್ಲೆಗೆ ಬಂದ ನಂತರ ವಿಜಯ್ ಉದ್ದೇಶಪೂರ್ವಕವಾಗಿ ನಾಲ್ಕು ಗಂಟೆ ತಡವಾಗಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದಾಗಿ ಜನಸಂದಣಿಯಲ್ಲಿ ಅಶಾಂತಿ ಮತ್ತು ಅನಿಯಂತ್ರಿತ ಪರಿಸ್ಥಿತಿ ಉಂಟಾಯಿತು ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ.
ಅಧಿಕಾರಿಗಳು ವಿಧಿಸಿದ ಷರತ್ತುಗಳನ್ನು ಉಲ್ಲಂಘಿಸಿ ವಿಜಯ್ ಅನುಮತಿಯಿಲ್ಲದೆ ರೋಡ್ ಶೋ ನಡೆಸಿದ್ದಾರೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಟಿವಿಕೆಯ ಇತರ ಹಿರಿಯ ನಾಯಕರು ಪದೇ ಪದೇ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.