ಕಲಬುರ್ಗಿ,ಸೆ. 29 (DaijiworldNews/AK): ಜಾತಿ ಗಣತಿಯಲ್ಲಿ ಸರಕಾರ ಮುಳುಗಿ ಹೋಗಿದೆ. ಅದು ನಡೆಯುತ್ತದೆ. ಆದರೆ, ಸರಕಾರದ ಆದ್ಯತೆ ರಾಜ್ಯದ ರೈತರ ಬಗ್ಗೆ ಇರಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರೈತರ ಜೊತೆ ಹುಡುಗಾಟಿಕೆ ಆಡದಿರಿ. ತಕ್ಷಣ ಪರಿಹಾರ ಘೋಷಿಸಿ ಎಂದು ತಿಳಿಸಿದರು. ನಿಮ್ಮ ಕೃಷಿ, ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಇಲ್ಲಿನ ಉಸ್ತುವಾರಿ ಸಚಿವರು ಆಕಾಶದಲ್ಲೇ ಇರುತ್ತಾರೆ. ಅವರು ನೆಲಕ್ಕೆ ಇಳಿಯುವುದಿಲ್ಲ ಎಂದು ಟೀಕಿಸಿದರು. ರಾಜ್ಯಕ್ಕೆ ಪಾಠ ಹೇಳುವ ಪ್ರಿಯಾಂಕ್ ಖರ್ಗೆಯವರು ಇಂಥ ಸಂದರ್ಭದಲ್ಲಾದರೂ ಸ್ವಲ್ಪ ಭೂಮಿಗೆ ಇಳಿದು ರೈತರ ಹೊಲಕ್ಕೆ ಭೇಟಿ ಕೊಟ್ಟು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ರಾಜ್ಯ ಸರಕಾರ ಜವಾಬ್ದಾರಿ ಹೊರಬೇಕು ಎಂದು ಆಗ್ರಹಿಸಿದರು.
ರೈತರು ಮುಂದಿನ ಬೆಳೆ ಬೆಳೆಯಲಾಗದ ಸ್ಥಿತಿ ಬಂದಿದೆ. ಅವರ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯ ಸರಕಾರವು ಕುಂಭಕರ್ಣ ನಿದ್ರೆಯಿಂದ ಎದ್ದು ಬಂದು ರೈತರ ಸಮಸ್ಯೆಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.
ನಿಮ್ಮ ಪುಣ್ಯಾತ್ಮ ಸಚಿವರನ್ನು ಹಳ್ಳಿಗಳಿಗೆ ಕಳುಹಿಸಿ
ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ಪರಿಹಾರ ಕೊಡುವುದು ದೂರದ ಮಾತು. ರಾಜ್ಯ ಸರಕಾರ ಬದುಕಿದೆಯೇ ಎಂದು ಕೇಳಿದರು. ರಾಜ್ಯದ ಕೃಷಿ, ಕಂದಾಯ, ಉಸ್ತುವಾರಿ ಸಚಿವರು ಏನು ಕಡಿದು ಕಟ್ಟೆ ಹಾಕುತ್ತಿದ್ದಾರೆ? ಅವರೆಲ್ಲ ಬೆಂಗಳೂರಿಗೇ ಸೀಮಿತರಾಗಿದ್ದಾರಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ನಾನು ರಾಜಕಾರಣ ಮಾಡುತ್ತಿಲ್ಲ; ದಯವಿಟ್ಟು ನಿಮ್ಮ ಪುಣ್ಯಾತ್ಮ ಸಚಿವರನ್ನು ಹಳ್ಳಿಗಳಿಗೆ ಕಳಿಸಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಅವರು ರೈತರ ಹೊಲಕ್ಕೆ ಭೇಟಿ ಕೊಡಲಿ; ಶೇ 70-80 ಬೆಳೆನಾಶವಾಗಿದೆ. ವಿಮೆಯೂ ಕೆಲವೆಡೆ ಸಿಗುತ್ತಿಲ್ಲ ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷದ್ದು ಮುಠ್ಠಾಳರ ಸರಕಾರ
ರಾಜ್ಯದ ಕಾಂಗ್ರೆಸ್ ಪಕ್ಷದ್ದು ಮುಠ್ಠಾಳರ ಸರಕಾರ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಏಕಾಂಗಿಯಾಗಿ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ಪ್ರವಾಹಪೀಡಿತರಿಗೆ ರಾಜ್ಯದಿಂದ ಎನ್ಡಿಆರ್ಎಫ್ ಮಾದರಿಯ ನೆರವು ನೀಡಿದ್ದರು. ಇದೆಲ್ಲವನ್ನೂ ನಾನು ನೆನಪಿಸುತ್ತಿದ್ದು, ಅದರಿಂದಲಾದರೂ ಸಿದ್ದರಾಮಯ್ಯನವರು ಎಚ್ಚತ್ತುಕೊಂಡು ಸ್ಪಂದಿಸಲಿ ಎಂದು ಹೇಳುತ್ತಿದ್ದೇನೆ ಎಂದರು.