ದೆಹಲಿ, ಸೆ. 29 (DaijiworldNews/AA): ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ರೈಲ್ವೆ ವಲಯದಲ್ಲಿ ಅಗಾಧ ಪ್ರಗತಿಯುಂಟಾಗಿದ್ದು, ದೇಶದ ಅರ್ಥವ್ಯವಸ್ಥೆಯಲ್ಲಿ ರೈಲ್ವೆ ಕ್ಷೇತ್ರದ ಕೊಡುಗೆಯೂ ಅಪಾರವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ದೆಹಲಿಯಲ್ಲಿಂದು ತಿಳಿಸಿದ್ದಾರೆ.

ಬಿಹಾರದ ಪಾಟ್ನಾ ಜಂಕ್ಷನ್ನಿಂದ ಬಿಹಾರಕ್ಕೆ ಏಳು ರೈಲುಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಅವರು, "ರೈಲು ಇಂದು ಜನ ಸಾಮಾನ್ಯರ ಅಗತ್ಯಗಳಲ್ಲಿ ಒಂದಾಗಿದೆ. ಆದರೆ ಹಲವು ರಾಜ್ಯಗಳಲ್ಲಿ ರೈಲಿನ ಕೊರತೆಯಿಂದಾಗಿ ಸಮಸ್ಯೆ ಉಂಟಾಗಿತ್ತು. ಅಂಥ ರಾಜ್ಯಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಕಾಳಜಿ ಹೊಂದಿ ರೈಲು ಸಂಚಾರವನ್ನು ಸುಗಮಗೊಳಿಸಿದ್ದಾರೆ" ಎಂದರು.
"ಮಧ್ಯಮ ವರ್ಗ ಮತ್ತು ಸಾಮಾನ್ಯ ಜನರಲ್ಲಿ ಜನಪ್ರಿಯ ರೈಲು ಎಂದು ವಿಶಿಷ್ಟ ಗುರುತನ್ನು ಗಳಿಸಿರುವ ಅಮೃತ್ ಭಾರತ್ ಎಕ್ಸ್ ಪ್ರೆಸ್, ಪ್ರಸ್ತುತ ದೇಶಾದ್ಯಂತ 12 ಸೇವೆಗಳನ್ನು ನಿರ್ವಹಿಸುತ್ತಿದ್ದು, ಅವುಗಳಲ್ಲಿ 10 ರೈಲುಗಳು ಬಿಹಾರದಿಂದ ಚಲಿಸುತ್ತವೆ. ಇನ್ನೂ ಮೂರು ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಪ್ರಾರಂಭಿಸುವುದರೊಂದಿಗೆ, ಅಮೃತ್ ಭಾರತ್ ರೈಲುಗಳ ಒಟ್ಟು ಸಂಖ್ಯೆ 15ಕ್ಕೆ ಏರಲಿದೆ" ಎಂದು ಹೇಳಿದರು.
"ರೈಲ್ವೆ ಅಭಿವೃದ್ಧಿಗಾಗಿ ಬಜೆಟ್ನಲ್ಲಿ ವಿಶೇಷ ಅನುದಾನವನ್ನು ಮೀಸಲು ಇಡಲಾಗುತ್ತಿದೆ. ಇಂದು ಬಜೆಟ್ ನ 1 ಲಕ್ಷ ಕೋಟಿ ರೂಪಾಯಿ ಮೊತ್ತದ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆ. 2014ಕ್ಕೂ ಮುನ್ನ ಬಿಹಾರದ ರೈಲ್ವೆಯ ಅಭಿವೃದ್ಧಿಗಾಗಿ ಒಂದು ಸಾವಿರ ಕೋಟಿ ರೂಪಾಯಿ ಬಜೆಟ್ ಇಡಲಾಗಿತ್ತು. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು 10 ಸಾವಿರ ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಿದ್ದಾರೆ" ಎಂದು ಮಾಹಿತಿ ನೀಡಿದರು.
ಇದೇ ವೇಳೆ, ಸಚಿವ ಅಶ್ವಿನಿ ವೈಷ್ಣವ್ ಬಿಹಾರಕ್ಕೆ ಏಳು ರೈಲುಗಳನ್ನು ಲೋಕಾರ್ಪಣೆ ಮಾಡಿದರು. ಅವುಗಳಲ್ಲಿ ಮೂರು ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳು ಮತ್ತು ನಾಲ್ಕು ಪ್ರಯಾಣಿಕ ರೈಲುಗಳು ಸೇರಿವೆ.