ಕಾರವಾರ, ಸೆ. 29 (DaijiworldNews/AA): ಗೋಕರ್ಣದ ರಾಮತೀರ್ಥ ಅರಣ್ಯದ ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ರಷ್ಯಾದ ಮಹಿಳೆ ನೀನಾ ಕುಟೀನಾ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಕೊನೆಗೂ ಸ್ವದೇಶಕ್ಕೆ ಕಳುಹಿಸಲಾಗಿದೆ.

ಜುಲೈ 10 ರಂದು ಗೋಕರ್ಣದ ಪೊಲೀಸರು ಬೀಟ್ನಲ್ಲಿ ತಪಾಸಣೆಗೆ ತೆರಳಿದ್ದಾಗ ರಾಮತೀರ್ಥ ಅರಣ್ಯದ ಗುಹೆಯಲ್ಲಿ ರಷ್ಯಾ ಮಹಿಳೆ ತನ್ನ ಮಕ್ಕಳಾದ ಪ್ರೆಯಾ (6) ಹಾಗೂ ಅಮಾ (4) ಜೊತೆಗೆ ಗುಹೆಯಲ್ಲಿ ವಾಸವಾಗಿರುವುದು ಬೆಳಕಿಗೆ ಬಂದಿತ್ತು. ಬಳಿಕ ಪೊಲೀಸರು ಇವರನ್ನು ರಕ್ಷಿಸಿದ್ದರು.
ಇದಾದ ಬಳಿಕ ಈಕೆಯ ಪತಿ ರಷ್ಯಾ ನಿವಾಸಿ ಡೋರ್ಶ್ಲೋಮೋ ಗೋಲ್ಡ್ಸ್ಟೈನ್ ಅವರು, ಪತ್ನಿಯನ್ನು ಹಾಗೂ ಮಕ್ಕಳನ್ನು ರಷ್ಯಾಗೆ ಕಳುಹಿಸುವಂತೆ ಬೆಂಗಳೂರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರ ಪೀಠ ತನಿಖೆ ನಡೆಸಿ ರಷ್ಯಾಗೆ ಕಳುಹಿಸುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು.
ಗೋಕರ್ಣ ಪೊಲೀಸರು ಈಕೆಯ ಮಕ್ಕಳ ಡಿ.ಎನ್.ಎ ಪರೀಕ್ಷೆ ನಡೆಸಿ ಈಕೆಯದ್ದೇ ಮಕ್ಕಳು ಎಂದು ದೃಢಪಡಿಸಿಕೊಂಡಿದ್ದಾರೆ. ಇನ್ನೂ ಮಹಿಳೆಯ ವಿಸಾ ಅವಧಿ ಮುಗಿದಿರುವುದು ಪೊಲೀಸರ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಇದೀಗ ಗೋಕರ್ಣ ಪೊಲೀಸರು ಮಹಿಳೆಯನ್ನು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ರಷ್ಯಾಗೆ ಕಳುಹಿಸಿದ್ದಾರೆ.