ಚೆನ್ನೈ, ಸೆ. 29 (DaijiworldNews/AA): ಕರೂರಿನ ರ್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಬೆನ್ನಲ್ಲೇ ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರಿಗೆ ಬಾಂಬ್ ಬೆದರಿಕೆ ಬಂದಿದ್ದು, ಅವರ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ.

ಚೆನ್ನೈನಲ್ಲಿರುವ ತಮ್ಮ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಸ್ಥಳೀಯ ಚೆನ್ನೈ ನಗರ ಮತ್ತು ಸಿಆರ್ಪಿಎಫ್ ಸಿಬ್ಬಂದಿಯನ್ನ ಮನೆಯ ಸುತ್ತಲೂ ನಿಯೋಜಿಸಲಾಗಿದೆ. ಕಾಲ್ತುಳಿತದಲ್ಲಿ ಸಾವು ನೋವು ಸಂಭವಿಸಿದ ಹಿನ್ನೆಲೆ ಸೆ.27ರ ಮಧ್ಯರಾತ್ರಿಯಿಂದಲೇ ವಿಜಯ್ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಬೆದರಿಕೆ ಬಂದ ಹಿನ್ನೆಲೆ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳಗಳಿಂದ ಮನೆಯ ಸುತ್ತಲೂ ಹಾಗೂ ಮನೆಯ ಒಳಾಂಗಣವನ್ನ ಪರಿಶೀಲಿಸಲಾಗಿದೆ.
ಕರೂರ್ನಲ್ಲಿ ನಡೆದ ವಿಜಯ್ ಅವರ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 10 ಮಕ್ಕಳು, 17 ಮಹಿಳೆಯರು ಮತ್ತು 13 ಪುರುಷರು ಸೇರಿದಂತೆ 40 ಜನರು ಸಾವನ್ನಪ್ಪಿದ್ದರು. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ 20 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ವಿಜಯ್ ಘೋಷಿಸಿದ್ದಾರೆ. ಇನ್ನು ಕಾಲ್ತುಳಿತದ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ಅಥವಾ ಸ್ವತಂತ್ರ ತನಿಖೆ ನಡೆಸಬೇಕೆಂದು ವಿಜಯ್ ಅವರ ಪಕ್ಷವು ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.