ಪಂಜಾಬ್, ಸೆ. 29 (DaijiworldNews/AA): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಹೀಗೆ ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐಪಿಎಸ್ ಅಧಿಕಾರಿ ನವಜೋತ್ ಸಿಮಿ ಅವರ ಯಶೋಗಾಥೆ ಇದು.

ನವಜೋತ್ ಸಿಮಿ ಪಂಜಾಬ್ನ ಗುರುದಾಸ್ಪುರ ಜಿಲ್ಲೆಯಲ್ಲಿ ಜನಿಸಿ ಬೆಳೆದವರು. ಅವರು ಅಲ್ಲಿನ ಮಾಡೆಲ್ ಪಬ್ಲಿಕ್ ಸ್ಕೂಲ್ನಲ್ಲಿ ಓದಿದರು ಮತ್ತು ಲೂಧಿಯಾನದ ಬಾಬಾ ಜಸ್ವಂತ್ ಸಿಂಗ್ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ದಂತ ಶಸ್ತ್ರಚಿಕಿತ್ಸೆಯಲ್ಲಿ (ಬಿಡಿಎಸ್) ಪದವಿ ಪಡೆದರು. ಆದರೆ ಅವರಿಗೆ ಯುಪಿಎಸ್ಸಿ ಬರೆದು ದೇಶ ಸೇವೆ ಮಾಡುವ ಹಂಬಲವಿತ್ತು.
ಪದವಿ ನಂತರ, ನವಜೋತ್ ಸಿಮಿ ಅವರು ದಂತವೈದ್ಯರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಜೊತೆಗೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. 2018ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆದ ಅವರು, 735ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನವಜೋತ್ ಸಿಮಿ ಅವರು, ಬಿಹಾರ ಕೇಡರ್ನ್ನು ಆರಿಸಿಕೊಂಡರು. ಹೈದರಾಬಾದಿನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ನಂತರ, ನವಜೋತ್ ಅವರನ್ನು ಮೊದಲು ಪಾಟ್ನಾದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಎಂದು ನೇಮಿಸಲಾಯಿತು.
ನವಜೋತ್ ಸಿಮಿ ಅವರನ್ನು ಇತ್ತೀಚೆಗೆ ಬಿಹಾರ ಮಿಲಿಟರಿ ಪೊಲೀಸ್ (ಬಿಎಂಪಿ) 8ರ ಕಮಾಂಡೆಂಟ್ ಆಗಿ ಬೇಗುಸರಾಯಿಗೆ ಮರು-ನೇಮಕ ಮಾಡಲಾಯಿತು.
ನವಜೋತ್ ಸಿಮಿ ಅವರು 2020ರಲ್ಲಿ ತುಷಾರ್ ಸಿಂಗ್ಲಾ ಅವರನ್ನು ವಿವಾಹವಾದರು. ಸಿಂಗ್ಲಾ ಅವರು 2015ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದು, ಬಿಹಾರದ ಬೇಗುಸರಾಯ್ ನ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.