ಬೆಂಗಳೂರು, ಸೆ. 28 (DaijiworldNews/AA): 'ಜಾತಿ ಸಮೀಕ್ಷೆಯನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಖಜಾನೆಯಲ್ಲಿ ಹಣವಿಲ್ಲದೆ, ರೇಷನ್ ಕಾರ್ಡ್ ರದ್ದು ಮಾಡುತ್ತಿದ್ದಾರೆ. ಅದಕ್ಕಾಗಿ ಮಾನದಂಡ ಬೇಕಾಗುತ್ತದೆ. ಈ ಕಾರಣಕ್ಕಾಗಿ ಹಾಗೂ ಯೋಜನೆಗಳಿಗೆ ಕತ್ತರಿ ಹಾಕಲು ಜಾತಿ ಸಮೀಕ್ಷೆ ಮಾಡಲಾಗುತ್ತಿದೆ' ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಸಾರ್ವಜನಿಕರ ವೈಯಕ್ತಿಕ ಸೂಕ್ಷ್ಮ ವಿಚಾರಗಳ ಬಗ್ಗೆ ಕೇಳಲಾಗಿದೆ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಇಲ್ಲಿ ನೀವು ಶೇರ್ ಮಾಡುವುದು ಕಡ್ಡಾಯವಲ್ಲ. ಇದೆಲ್ಲಾ ಬಿಪಿಎಲ್ ಕಾರ್ಡ್, ಆರೋಗ್ಯ ಕಾರ್ಡ್ ರದ್ದು ಮಾಡಲು ಸರ್ಕಾರ ನಡೆಸುತ್ತಿರುವ ಹುನ್ನಾರ. ಇದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲ ಇದು ಸಿದ್ದರಾಮಯ್ಯನವರ ಜಾತಿ ಸಮೀಕ್ಷೆ. ಇದು ಪಂಗನಾಮದ ಸಮೀಕ್ಷೆ. ಸಮೀಕ್ಷೆ ವಿಚಾರದಲ್ಲಿ ಜನರು ಎಚ್ಚರವಾಗಿರಬೇಕು' ಎಂದು ಕಿಡಿಕಾರಿದ್ದಾರೆ.
'ಮುಂದಿನ ಬಜೆಟ್ ರಚನೆ ಸಿಎಂ ಸಿದ್ದರಾಮಯ್ಯನವರಿಗೆ ಕಗ್ಗಂಟಾಗಿದೆ. ಅದಕ್ಕಾಗಿ ಹಣ ಉಳಿಸಬೇಕಿದೆ. ಇದು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಅಲ್ಲ, ಇದು ಸಿದ್ದರಾಮಯ್ಯನವರ ಜಾತಿ ಸಮೀಕ್ಷೆ. ಜನರಿಗೆ ಪಂಗನಾಮ ಹಾಕುವ ಸಮೀಕ್ಷೆ. ಯಾರೂ ವೈಯಕ್ತಿಕ ದಾಖಲೆಗಳನ್ನು ನೀಡಬಾರದು. ಯಾವ್ಯಾವ ಪ್ರಶ್ನೆಗೆ ಉತ್ತರ ಕೊಡಬಹುದೋ ಅಷ್ಟನ್ನು ಮಾತ್ರ ನೀಡಿದರೆ ಸಾಕು. ಹೈಕೋರ್ಟ್ ಕೂಡ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕಿಲ್ಲ ಎಂದಿದೆ' ಎಂದು ಹೇಳಿದರು.