ಬೆಂಗಳೂರು, ಸೆ. 18 (DaijiworldNews/TA): ಸಿಲಿಕಾನ್ ಸಿಟಿ ಬೆಂಗಳೂರು ರಸ್ತೆಗುಂಡಿಗಳ ಸಮಸ್ಯೆ ಇದೀಗ ಆರ್ಥಿಕ-ಉದ್ಯಮಿಕ ಹಿನ್ನಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನ ಮೂಲಸೌಕರ್ಯಗಳ ನಿರ್ಲಕ್ಷ್ಯದಿಂದಾಗಿ ಐಟಿ ಹಾಗೂ ಸ್ಟಾರ್ಟ್ಅಪ್ ಕಂಪನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಲಾಜಿಸ್ಟಿಕ್ಸ್ ಸ್ಟಾರ್ಟ್ಅಪ್ ಕಂಪನಿ ಬ್ಲ್ಯಾಕ್ಬಕ್ ಸ್ಪಷ್ಟವಾಗಿ ಬೆಂಗಳೂರು ತೊರೆಯುವುದಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್, “ತೃಪ್ತಿ ಇಲ್ಲದವರು ಹೋಗಬಹುದು, ಆದರೆ ಸರ್ಕಾರಕ್ಕೆ ಬ್ಲಾಕ್ಮೇಲ್ ಮಾಡುವ ಕೆಲಸ ಸಹಿಸದು,” ಎಂದು ಖಡಕ್ ಸಂದೇಶ ನೀಡಿದ್ದಾರೆ.

ಡಿಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಬೆಂಗಳೂರಿನ ಮೂಲಸೌಕರ್ಯ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ ಎಂದರು. ರಸ್ತೆಗುಂಡಿಗಳ ಸಮಸ್ಯೆ ಪರಿಹಾರಕ್ಕೆ ನವೆಂಬರ್ ಅಂತ್ಯದವರೆಗೆ ಗುತ್ತಿಗೆದಾರರಿಗೆ ಗಡುವು ನೀಡಲಾಗಿದೆ ಎಂದು ತಿಳಿಸಿದರು. “ಗುಂಡಿ ಮುಚ್ಚುವ ಕೆಲಸಕ್ಕೆ ಹಣ ಬಿಡುಗಡೆ ಆಗಿದೆ. ಗುತ್ತಿಗೆದಾರರು ಕೆಲಸ ಆರಂಭಿಸಿದ್ದಾರೆ. ಸಮಸ್ಯೆ ನಿರ್ವಹಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ,” ಎಂದು ಅವರು ಹೇಳಿದರು.
ಬೆಂಗಳೂರು ರಸ್ತೆಗಳ ದುಸ್ಥಿತಿ, ಸಂಚಾರದ ಅವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆಯಿಂದಾಗಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ಅಸಮಾಧಾನ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬ್ಲ್ಯಾಕ್ಬಕ್ ಸಿಇಒ ರಾಜೇಶ್ ಯಬಾಜಿ ಟ್ವೀಟ್ ಮೂಲಕ ತಮ್ಮ ಸಂಸ್ಥೆ ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿರುವುದಾಗಿ ಘೋಷಿಸಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರು. ಅವರ ಈ ಹೇಳಿಕೆಗೆ ಹಲವು ಉದ್ಯಮಿಗಳು ಬೆಂಬಲ ಸೂಚಿಸಿ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ಕಂಪನಿಗಳ ಸ್ಥಳಾಂತರ ನಿರ್ಧಾರ ವ್ಯಾಪಾರ ಹಿನ್ನಲೆ ಹೊಂದಿರಬಹುದು. ಬೆಂಗಳೂರಿಗೆ ಪ್ರತಿದಿನ ನೂರಾರು ಹೊಸ ಕಂಪನಿಗಳು ಬರುತ್ತಿವೆ. ನಾವು ನಗರಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಲು ಬದ್ಧರಾಗಿದ್ದೇವೆ,” ಎಂದು ಹೇಳಿದರು. ಬೆಂಗಳೂರು ಇತಿಹಾಸದಲ್ಲಿ ಪ್ರಥಮ ಬಾರಿಗೆ 112 ಕಿ.ಮೀ ಫ್ಲೈಓವರ್ ಹಾಗೂ 44 ಕಿ.ಮೀ ಎತ್ತರದ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣವಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಯೋಜನೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಶಹರಿನ ಸಂಚಾರ ವ್ಯವಸ್ಥೆಯ ಸುಧಾರಣೆಗೆ ಸಹಕಾರಿಯಾಗಲಿವೆ ಎಂದಿದ್ದಾರೆ.