ನವದೆಹಲಿ, ಸೆ. 18 (DaijiworldNews/TA): ದೆಹಲಿ ಮೃಗಾಲಯದಲ್ಲಿರುವ ಏಕೈಕ ಆಫ್ರಿಕನ್ ಆನೆ ಶಂಕರ್ ಸಾವನ್ನಪ್ಪಿದ್ದು, ಸಾವಿಗೆ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಶಂಕರ್ ಎಂಬ 29 ವರ್ಷದ ಗಂಡು ಆಫ್ರಿಕನ್ ಆನೆ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಸಾವನ್ನಪ್ಪಿದೆ.

ದೆಹಲಿ ಮೃಗಾಲಯವು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿ, "ನವದೆಹಲಿಯ ರಾಷ್ಟ್ರೀಯ ಪ್ರಾಣಿಶಾಸ್ತ್ರ ಉದ್ಯಾನವನವು ಸೆಪ್ಟೆಂಬರ್ 17, 2025 ರಂದು ರಾತ್ರಿ 8 ಗಂಟೆಗೆ 29 ವರ್ಷದ ಆಫ್ರಿಕನ್ ಆನೆ ಶಂಕರ್ ನಿಧನವಾದ ಬಗ್ಗೆ ತಿಳಿಸಲು ತುಂಬಾ ದುಃಖಿತವಾಗಿದೆ" ಎಂದು ಹೇಳಿದೆ.
ಸಾವಿಗೆ ಕಾರಣವೇನೆಂದು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ಬರೇಲಿಯ ಐವಿಆರ್ಐ ತಜ್ಞರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಆರೋಗ್ಯ ಸಲಹಾ ಸಮಿತಿ ಮತ್ತು ಕೇಂದ್ರ ಪರಿಸರ ಸಚಿವಾಲಯದ ಪ್ರತಿನಿಧಿ ತನಿಖೆಯ ಭಾಗವಾಗಿರುತ್ತಾರೆ.
ಜಿಂಬಾಬ್ವೆಯಿಂದ ಭಾರತಕ್ಕೆ ಉಡುಗೊರೆಯಾಗಿದ್ದ ಶಂಕರ್, ದೆಹಲಿ ಮೃಗಾಲಯದ 27 ವರ್ಷಗಳ ಕಾಲ ಅಮೂಲ್ಯ ಸದಸ್ಯವಾಗಿದ್ದಿತು. ಆನೆ 1998 ರ ನವೆಂಬರ್ನಲ್ಲಿ ಮೃಗಾಲಯಕ್ಕೆ ಆಗಮಿಸಿತ್ತು. ಬಾಂಬೈ ಎಂಬ ಹೆಸರಿನ ಆಫ್ರಿಕನ್ ಹೆಣ್ಣು ಆನೆಯ ಮರಣದ ನಂತರ, ಶಂಕರ್ 2005 ರಿಂದ ಒಂಟಿಯಾಗಿ ವಾಸಿಸುತ್ತಿತ್ತು.