ಬೆಂಗಳೂರು, ಸೆ. 18 (DaijiworldNews/TA): ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಆರಂಭವಾಗಲು ಕೆಲವೇ ದಿನಗಳು ಬಾಕಿಯಿರುವಂತೆಯೇ, ಮೈಸೂರಿನಲ್ಲಿ ಸಕಲ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಆದರೆ ಈ ಬಾರಿ ದಸರಾ ಉದ್ಘಾಟಕರ ಆಯ್ಕೆ ವಿವಾದದ ಕೇಂದ್ರಬಿಂದುವಾಗಿದ್ದು, ಸರ್ಕಾರದ ನಿರ್ಧಾನದ ವಿರುದ್ಧ ಕಾನೂನು ಹೋರಾಟವೇ ಶುರುವಾಗಿದೆ.

ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದು ಕೆಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಆಯ್ಕೆ ಪ್ರಶ್ನಿಸಿ ಮೊದಲಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಆ ಅರ್ಜಿಯನ್ನು ವಜಾ ಮಾಡಿದ ಹಿನ್ನೆಲೆಯಲ್ಲಿ, ಇದೀಗ ವಿವಾದ ಮತ್ತಷ್ಟು ತೀವ್ರಗೊಂಡಿದೆ.
ಇದೀಗ ಹೊಸ ಮೊಕದ್ದಮೆಯಾಗಿ, ಚಾಮುಂಡೇಶ್ವರಿ ದೇವಿಯ ಪೂಜೆಗೆ ಹಿಂದೂಯೇತರ ವ್ಯಕ್ತಿಗೆ ಆಹ್ವಾನ ನೀಡಲಾಗಿದೆ ಎಂದು ಆಕ್ಷೇಪಿಸಿ ಬೆಂಗಳೂರಿನ ನಿವಾಸಿ ಹೆಚ್.ಎಸ್. ಗೌರವ್ ಅವರು ಭಾರತ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ತುರ್ತು ವಿಚಾರಣೆ ಮಾಡುವಂತೆ ವಕೀಲರು ಪ್ರಧಾನ ನ್ಯಾಯಮೂರ್ತಿ ಪೀಠಕ್ಕೆ ಮನವಿ ಮಾಡಿದ್ದು, ಅದನ್ನು ಸ್ವೀಕರಿಸಿರುವ ಸಿಜೆಐ ಬಿ.ಆರ್. ಗವಾಯಿ ಅವರು ತುರ್ತು ಪಟ್ಟಿ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.
ಈ ಹಿಂದೆ ದಸರಾ ಉದ್ಘಾಟನೆಯಂತೆ ಸಾಂಸ್ಕೃತಿಕ, ಧಾರ್ಮಿಕ ಅಂಶಗಳಿಗೆ ಹೊಂದಿಕೊಂಡಂತೆ ಉದ್ಘಾಟಕರ ಆಯ್ಕೆಗೆ ಮೌಲ್ಯ ನೀಡಲಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ ಈ ವರ್ಷ ಸರ್ಕಾರ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ ಹಿನ್ನೆಲೆ ವಿವಾದದ ಸುಳಿಗೆ ಸಿಕ್ಕಿದ್ದು, ಉಚ್ಚ ನ್ಯಾಯಾಲಯದ ತೀರ್ಪು ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.