ಬೆಂಗಳೂರು,ಸೆ. 18 (DaijiworldNews/AK): ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಯೋಗ ಗುರು ನಿರಂಜನಾ ಮೂರ್ತಿಯನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಯೋಗ ಗುರು ನಿರಂಜನಾ ಮೂರ್ತಿ ರಾಜರಾಜೇಶ್ವರಿ ನಗರದಲ್ಲಿ ಯೋಗ ಕೇಂದ್ರವೊಂದನ್ನು ನಡೆಸುತ್ತಿದ್ದ. ಈ ಯೋಗ ಸೆಂಟರ್ಗೆ ಓರ್ವ ಅಪ್ರಾಪ್ತ ಬಾಲಕಿ ಬರುತ್ತಿದ್ದಳು. ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ದು, ನಿನ್ನ ಹೆಸರು ಬರುವಂತೆ ಮಾಡುತ್ತೇನೆ. ಅದರಿಂದ ನಿನಗೆ ಸರ್ಕಾರಿ ಕೆಲಸವೂ ಸಿಗಬಹುದು ಎಂದು ನಂಬಿಸಿ, ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.
ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರಿಸಿಕೊಂಡಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.