ತುಮಕೂರು, ಸೆ. 17 (DaijiworldNews/AA): ಮೋದಿ ಅವರು ನೂರು ವರ್ಷ ಬಾಳಬೇಕು, ಅವರ ಸೇವೆ ಭಾರತಕ್ಕೆ ಇನ್ನೂ ಬೇಕಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬವನ್ನು ತುಮಕೂರಿನಲ್ಲಿ ಇಂದು ಸೋಮಣ್ಣ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಜೊತೆಗೆ ತುಮಕೂರು ಲೋಕಸಭಾ ವ್ಯಾಪ್ತಿಯ 40 ಸಾವಿರ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿ ಸೋಮಣ್ಣ, "ಪ್ರಧಾನಿ ಮೋದಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಿಸಿದ್ದಾರೆ. ಮೋದಿ ಅವರ ನಾಯಕತ್ವ ಇಡೀ ವಿಶ್ವ ಒಪ್ಪಿಕೊಳ್ಳುತ್ತಿದೆ. ಕಳೆದ 11 ವರ್ಷದಲ್ಲಿ ಭಾರತ ಹಿಂದೆಂದೂ ಕಂಡಿರದಂತಹ ಅಭಿವೃದ್ಧಿ ಕಂಡಿದೆ" ಎಂದರು.
ಇದೇ ವೇಳೆ ಮೋದಿ ಅವರ ನಿವೃತ್ತಿ ಬಗ್ಗೆ ಮಾತನಾಡಿದ ಅವರು, "ಈಗಾಗಲೇ ಆರ್ಎಸ್ಎಸ್ ಮುಖ್ಯಸ್ಥರು ಅದರ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಮೋದಿ ಅವರ ಸೇವೆ ಇನ್ನೂ ದೇಶಕ್ಕೆ ಬೇಕು" ಎಂದು ತಿಳಿಸಿದರು.