ಬೆಂಗಳೂರು,ಸೆ. 1 (DaijiworldNews/AK): ಗಣತಿ ಕಾನೂನಿನ ಪ್ರಕಾರ ರಾಜ್ಯ ಸರಕಾರಕ್ಕೆ ಗಣತಿ ಮಾಡುವ ಅಧಿಕಾರ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಗೋಲ್ಡ್ ಫಿಂಚ್ ಹೋಟೆಲ್ನಲ್ಲಿ ಇಂದು ಪ್ರಮುಖರ ಸಭೆ ನಡೆಯಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸರ್ವೇ ಮಾಡಬಹುದು. ಅದು ಸ್ಯಾಂಪಲ್ ಮೂಲಕ ನಡೆಸುವ ಸರ್ವೇ; ಇವರು ಒಂದೂವರೆ ಕೋಟಿ ಮನೆಗಳಿಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದಾರೆ. ಇದು ಕಾನೂನಿಗೆ ವಿರುದ್ಧವಾದ ಕ್ರಮ ಎಂದರು.
ಇಲ್ಲದೇ ಇರುವ ಜಾತಿಗಳನ್ನು ಸೇರಿಸಿ ಜಾತಿ- ಜಾತಿಗಳ ನಡುವೆ ಸಂಘರ್ಷ ಉಂಟು ಮಾಡಿ, ಅದರಲ್ಲಿ ರಾಜಕೀಯ ರೊಟ್ಟಿ ಸುಟ್ಟುಕೊಳ್ಳುವ ಪ್ರಯತ್ನವನ್ನು ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯ ಅವರು ಕಾಂತರಾಜು ಕಮಿಟಿ ಮಾಡಿದ್ದೇಕೆ? ಎಂದು ಕೇಳಿದರು. ಆ ವರದಿ ಏನಿದೆ ಎಂದು ಬಹಿರಂಗಪಡಿಸಬೇಕು. ಅದನ್ನು ತಿರಸ್ಕರಿಸಿದ್ದೇಕೆ, ಅದರಲ್ಲಿದ್ದ ಲೋಪಗಳೇನು ಎಂದು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಈಗಿನ ಸರ್ವೇ ಕಾನೂನುಪ್ರಕಾರ ಇದೆಯೇ? ಹಿಂದಿನ ಲೋಪವನ್ನು ಸರಿಪಡಿಸಲಾಗಿದೆಯೇ? ಎಂದು ಕೇಳಿದರು. ಧರ್ಮದ ಕಾಲಂನಲ್ಲಿ ಇತರರು, ನಾಸ್ತಿಕರನ್ನೂ ಸೇರಿಸುತ್ತಿದ್ದಾರೆ. ಯಾಕೆ ಈ ಗೊಂದಲ ಸೃಷ್ಟಿ ಮಾಡುತ್ತೀರಿ ಎಂದು ಕೇಳಿದರು. ನಾಸ್ತಿಕರಿಗೆ ದೇವರು, ಧರ್ಮ ಇಲ್ಲ; ಮತ್ಯಾಕೆ ನಾಸ್ತಿಕರನ್ನು ಸೇರಿಸುತ್ತೀರಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಎಲ್ಲದರಲ್ಲೂ ಮತಾಂತರಿತ ಕ್ರಿಶ್ಚಿಯನ್ ಜಾತಿಗಳನ್ನು ಸೇರಿಸಲಾಗಿದೆ. ಕ್ರಿಶ್ಚಿಯನ್ನರಿಂದ ಹಿಂದೂ ಆದವರು ಏನು ಮಾಡಬೇಕು? ಮತಾಂತರಕ್ಕೆ ಸಂಬಂಧಿಸಿ ಕಾಲಂ ಮಾಡಲು ಯಾವ ಕಾನೂನು ಹೇಳುತ್ತದೆ ಎಂದು ಪ್ರಶ್ನಿಸಿದರು.
ಇದು ಯಾವ ಸಂವಿಧಾನದಲ್ಲಿದೆ. ಇವರು ಸಂವಿಧಾನವಿರೋಧಿ ನಿರ್ಣಯ ಮಾಡುತ್ತ ಬಂದಿದ್ದಾರೆ ಎಂದು ಆರೋಪಿಸಿದರು.