ಪ್ರಯಾಗರಾಜ್, ಸೆ. 16 (DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯನ್ನು ಕೆಲ ಅಭ್ಯರ್ಥಿಗಳು ತರಬೇತಿ ಪಡೆದು ಉತ್ತೀರ್ಣರಾಗುವಲ್ಲಿ ಸಫಲರಾದರೆ, ಇನ್ನೂ ಕೆಲ ಅಭ್ಯರ್ಥಿಗಳು ಸ್ವಯಂ ಅಧ್ಯಯನದ ಮೂಲಕ ಉತ್ತೀರ್ಣರಾಗುತ್ತಾರೆ. ಹೀಗೆ ಸ್ವಯಂ ಅಧ್ಯಯನದ ಮೂಲಕ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐಎಎಸ್ ಅಧಿಕಾರಿ ಅನನ್ಯಾ ಸಿಂಗ್ ಯಶೋಗಾಥೆ ಇದು.

ಪ್ರಯಾಗರಾಜ್ (ಹಿಂದಿನ ಅಲಹಾಬಾದ್) ಮೂಲದ ಅನನ್ಯಾ, 10 ಮತ್ತು 12ನೇ ತರಗತಿಗಳೆರಡರಲ್ಲೂ ಜಿಲ್ಲೆಗೆ ಅಗ್ರಸ್ಥಾನಿಯಾಗಿದ್ದರು. ಅವರು ಪ್ರಯಾಗರಾಜ್ನ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದು, 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 96% ಮತ್ತು 12ನೇ ತರಗತಿಯಲ್ಲಿ 98.25% ಅಂಕಗಳನ್ನು ಗಳಿಸಿದ್ದರು. ನಂತರ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸಿದರು.
ಐಎಎಸ್ ಅಧಿಕಾರಿಯಾಗುವ ಅನನ್ಯಾ ಅವರ ಬಯಕೆ ಚಿಕ್ಕ ವಯಸ್ಸಿನಲ್ಲೇ ಹುಟ್ಟಿತ್ತು. ಅವರು ತಮ್ಮ ಪದವಿಯ ಕೊನೆಯ ವರ್ಷದಲ್ಲಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಪ್ರಾರಂಭಿಸಿದರು. ಅನನ್ಯಾ ಅವರು ಯಾವುದೇ ತರಬೇತಿ ಕೇಂದ್ರಗಳಿಗೆ ತೆರಳದೇ ಸ್ವಂತ ಅಧ್ಯಯನದ ಮೇಲೆ ಮಾತ್ರ ಅವಲಂಬಿತರಾಗಿದ್ದರು. ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಟ್ಟರು.
2019ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅನನ್ಯಾ ಅವರು, 51ನೇ ರ್ಯಾಂಕ್ ಪಡೆದು ಉತ್ತೀರ್ಣರಾದರು. ೨೨ನೇ ವಯಸ್ಸಿನಲ್ಲಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ ಅವರು, ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ.
ಅನನ್ಯಾ ಸಿಂಗ್, ಮೂಲತಃ ಬಂಗಾಳ ಕೇಡರ್ನವರಾಗಿದ್ದು, ಈಗ ಬಿಹಾರ ಕೇಡರ್ಗೆ ವರ್ಗಾವಣೆಯಾಗಿದ್ದಾರೆ. ಅವರು ಔರಂಗಾಬಾದ್ ಜಿಲ್ಲೆಯ ಉಪ ಅಭಿವೃದ್ಧಿ ಆಯುಕ್ತರಾಗಿ (ಡಿಡಿಸಿ) ನೇಮಕಗೊಂಡಿದ್ದಾರೆ. ಇದರ ಜೊತೆಗೆ, ಅವರಿಗೆ ಔರಂಗಾಬಾದ್ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ.