ಬೆಂಗಳೂರು, ಸೆ. 15 (DaijiworldNews/AK): ಒಳ ಮೀಸಲಾತಿಯ ವಿಷಯದಲ್ಲಿ ಕೊಟ್ಟ ನಮ್ಮ ಒಂದು ವಾರದ ಗಡುವನ್ನು ಕರ್ನಾಟಕ ಸರಕಾರವು ಹಗುರವಾಗಿ ಪರಿಗಣಿಸಬಾರದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಎಚ್ಚರಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಮಾತನಾಡಿದ ಅವರು, ಈ ಸರಕಾರದ ಬಳಿ 2 ದಿನ ಸಮಯ ಇದೆ. ನಮ್ಮನ್ನು ಕರೆದು ಮಾತನಾಡಬೇಕಿತ್ತು. ಮರು ಪರಿಶೀಲನೆಗೆ ಕೈಗೊಳ್ಳುವ ಕ್ರಮದ ಕುರಿತು ಹೇಳಬೇಕಿತ್ತು ಎಂದು ತಿಳಿಸಿದರು. ಇದು ನಮ್ಮ ಸಮುದಾಯಗಳ ನಿರ್ಲಕ್ಷ್ಯ ಎಂದು ಟೀಕಿಸಿದ ಅವರು, ನಿರ್ಲಕ್ಷ್ಯಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ನುಡಿದರು.
ಇದೇ ಬುಧವಾರ ಸಂಜೆ 5 ಗಂಟೆಗೆ ನಾವು ಕೊಟ್ಟ ಗಡುವು ಮುಕ್ತಾಯವಾಗಲಿದೆ. ಸರಕಾರವು ಈ ಶೋಷಿತ ಸಮುದಾಯಗಳ ನೋವನ್ನು ಈ ರೀತಿ ನಿರ್ಲಕ್ಷಿಸಿದರೆ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು. ಹಿಂಬರಹ ಯಾಕೆ ಕೊಟ್ಟಿಲ್ಲ? ಕೈಗೊಂಡ ಕ್ರಮಗಳೇನು? 35- 40 ಸಾವಿರ ಜನರ ಹೋರಾಟದ ವಿಚಾರವಾಗಿ ಸರಕಾರದ ನಿಲುವೇನು ಎಂದು ಅವರು ಮನವಿ ಸ್ವೀಕರಿಸಿದ್ದ ರಾಮಲಿಂಗಾರೆಡ್ಡಿಯವರನ್ನು ಪ್ರಶ್ನಿಸಿದರು.
ಮೊನ್ನೆ ಕೈಗೊಂಡ ಹೋರಾಟಕ್ಕಿಂತ ತೀವ್ರವಾದ ಹೋರಾಟ ಮುಂದೆ ನಡೆಯಲಿದೆ ಎಂದು ಅವರು ಎಚ್ಚರಿಕೆ ನೀಡಿದರು. ಬುಧವಾರ ಸಂಜೆ 5 ಗಂಟೆ ವರೆಗೆ ಈ ಸರಕಾರದ ನಿರ್ಧಾರಕ್ಕಾಗಿ ನಿರೀಕ್ಷಿಸುತ್ತೇವೆ. ನಂತರ ನಮ್ಮ ಮುಂದಿನ ಹೋರಾಟದ ಕುರಿತು ನಿರ್ಧರಿಸಲಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ಸರಕಾರವು ಒಳ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸಿದೆ. ಅಸಾಂವಿಧಾನಾತ್ಮಕವಾಗಿ ಅನುಷ್ಠಾನಕ್ಕೆ ತಂದಿದೆ. ಸುಪ್ರೀಂ ಕೋರ್ಟಿನ ಮಾನದಂಡಗಳು ಪಾಲನೆ ಆಗಿಲ್ಲ. ಯಾವ ವರದಿಗಳನ್ನೂ ಇವರು ಅನುಷ್ಠಾನಕ್ಕೆ ತಂದಿಲ್ಲ ಎಂದು ಟೀಕಿಸಿದರು.
ಯಾವ ಆಯೋಗದ ಶಿಫಾರಸುಗಳನ್ನೂ ಇವರು ಅನುಷ್ಠಾನಕ್ಕೆ ತಂದಿಲ್ಲ ಎಂದ ಅವರು, ಹಿಂದೆ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರವು ಬೋವಿ, ಬಂಜಾರ, ಕೊರಚ, ಕೊರಮ- ಈ 4 ಜಾತಿಗಳಿಗೆ ಶೇ 4.5 ಮೀಸಲಾತಿ ಕೊಟ್ಟಿತ್ತು. 59 ಅಲೆಮಾರಿ ಜಾತಿಗಳಿದ್ದು, ಅವರಿಗೆ ಪ್ರತ್ಯೇಕವಾಗಿ ಶೇ 1 ನೀಡಿತ್ತು ಎಂದು ವಿವರಿಸಿದರು. ಇವೆರಡೂ ಪ್ರವರ್ಗಗಳನ್ನು ಒಂದುಗೂಡಿಸಿ ಸುಮಾರು 63 ಜಾತಿಗೆ ಬಿಜೆಪಿ ಕೊಟ್ಟಷ್ಟೇ ಮೀಸಲಾತಿ ಕೊಟ್ಟಿದ್ದರೂ ಶೇ 5.5 ಮೀಸಲಾತಿ ಸಿಗಬೇಕಿತ್ತು ಎಂದು ತಿಳಿಸಿದರು.
ಆದರೆ, ಈ ಸರಕಾರವು 2 ಪ್ರವರ್ಗಗಳನ್ನು ಸೇರಿಸಿ ಶೇ 5ಕ್ಕೆ ನಿಗದಿ ಮಾಡಿ, ಶೇ 0.5 ಅನ್ನು ಕಿತ್ತುಕೊಂಡಿದ್ದಾರೆ. ಇದರ ವಿರುದ್ಧ 10ರಂದು ಫ್ರೀಡಂ ಪಾರ್ಕಿನಲ್ಲಿ ಎಲ್ಲ ಸಮುದಾಯಗಳು ಒಟ್ಟಾಗಿ ದೊಡ್ಡ ಹೋರಾಟವನ್ನು ಕೈಗೊಂಡಿದ್ದೆವು. ಅವತ್ತು ರಾಮಲಿಂಗಾರೆಡ್ಡಿಯವರು ಬಂದು ಮನವಿ ಸ್ವೀಕರಿಸಿದ್ದರು. ಈ ಸರಕಾರಕ್ಕೆ ಒಂದು ವಾರದ ಗಡುವನ್ನು ನೀಡಿದ್ದೆವು ಎಂದರು. ಇವತ್ತಿನವರೆಗೆ ಸರಕಾರವು ತಾವು ಕೈಗೊಂಡ ಕ್ರಮಗಳ ಕುರಿತು ತಿಳಿಸಿಲ್ಲ; ಹಿಂಬರಹವನ್ನೂ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು.