ಶಿಮ್ಲಾ, ಸೆ. 13 (DaijiworldNews/AA): ಮೇಘಸ್ಫೋಟ ಸಂಭವಿಸಿದ ಪರಿಣಾಮ ಹಲವಾರು ವಾಹನಗಳು ಅವಶೇಷಗಳಡಿ ಹೂತುಹೋಗಿದ್ದು, ಅಪಾರ ಪ್ರಮಾಣದ ಬೆಳೆಹಾನಿಯುಂಟಾದ ಘಟನೆ ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನ ಜಾವ ನಡೆದಿದೆ.

ನೈನಾ ದೇವಿ ವಿಧಾನಸಭಾ ಕ್ಷೇತ್ರದ ನಮ್ಹೋಲ್ ಪ್ರದೇಶದ ಗುತ್ರಹಾನ್ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯ ರಾಜಧಾನಿ ಶಿಮ್ಲಾದಲ್ಲಿ ದಟ್ಟ ಮಂಜು ಆವರಿಸಿದ್ದು, ಕಡಿಮೆ ಗೋಚರತೆಯ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಶನಿವಾರ ಮತ್ತು ಭಾನುವಾರ ರಾಜ್ಯದ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮೇಘಸ್ಪೋಟದಿಂದಾಗಿ ಅಟ್ಟಾರಿ-ಲೇಹ್ ರಸ್ತೆ (NH-3), ಆಟ್-ಸೈಂಜ್ ರಸ್ತೆ (NH-305) ಮತ್ತು ಅಮೃತಸರ-ಭೋಟಾ ರಸ್ತೆ (NH-5030) ಸೇರಿದಂತೆ ಒಟ್ಟು 503 ರಸ್ತೆಗಳನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.