ಬೆಂಗಳೂರು, ,ಸೆ. 13 (DaijiworldNews/AK): ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ನಿಂತಿದೆ. ಒಂದು ಕಡೆ ಓಲೈಕೆ ಮತ್ತೊಂದು ಕಡೆ ಅಲ್ಪಸಂಖ್ಯಾತರನ್ನು ಕಂಡರೆ ಭಯ ಹೆಚ್ಚಾಗಿ ರಣಹೇಡಿತನವನ್ನು ಕಾಂಗ್ರೆಸ್ ಸರ್ಕಾರ ಪ್ರದರ್ಶಿಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಓಲೈಕೆಗಿಂತ ಹೆಚ್ಚು ಇವರಿಗೆ ಭಯ ಪ್ರಾರಂಭವಾಗಿದೆ. ಏಕೆಂದರೆ ಅಲ್ಪಸಂಖ್ಯಾತರನ್ನು ನಿಯಂತ್ರಣ ಮಾಡುವ ಶಕ್ತಿ ಈ ಸರ್ಕಾರಕ್ಕೆ ಇಲ್ಲ. ಆದ್ದರಿಂದ ರಾಜ್ಯ ಸರ್ಕಾರ ಗಣೇಶೋತ್ಸವಗಳನ್ನು ಮಾಡುವುದಕ್ಕೆ ಅವಕಾಶಕೊಡದೆ ದೊಡ್ಡ ದೊಡ್ಡ ರಾದ್ಧಾಂತಗಳನ್ನು ಸೃಷ್ಟಿ ಮಾಡುತ್ತಿದೆ ಎಂದು ದೂರಿದರು.
ಹಿಂದಿನ ಪದ್ಧತಿಗಳಂತೆ ಗಣೇಶೋತ್ಸವಗಳು ಯಾವಾಗಲೂ ನಡೆದುಕೊಂಡು ಬರುತ್ತಿದೆ. ಎಂದೂ ಗಲಾಟೆಗಳು ಆಗಿರಲಿಲ್ಲ. ಸರ್ಕಾರ ಮತಬ್ಯಾಂಕಿನ ಕಾರಣಕ್ಕೆ ಅವರನ್ನು ಓಲೈಕೆ ಮಾಡುವ ನೆಪದಿಂದ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಕ್ಕಿಕೊಂಡಿರುವ ಅಲ್ಪಸಂಖ್ಯಾತರ ಕೇಸುಗಳನ್ನು ವಾಪಸ್ ಪಡೆದು ಅವರಿಗೆ ಶಾಂತಿದೂತ ಪಟ್ಟಕೊಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದರು. ಆ ತಕ್ಷಣವೇ ಇಡೀ ರಾಜ್ಯದಲ್ಲಿ ನೆಮ್ಮದಿ ಕೆಡಸುವ ಕೆಲಸ ಆ ಜನರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸರ್ಕಾರ ಹಿಂದುತ್ವ ವಿರೋಧಿ. ಸಂವಿಧಾನ ಇರುವುದು ಯಾರನ್ನೋ ಓಲೈಕೆ ಮಾಡುವುದಕ್ಕೆ ಮತ್ತು ಯಾರನ್ನೋ ತುಳಿಯುವುದಕ್ಕೆ ಅಲ್ಲ. ಸರ್ವರನ್ನೂ ಒಳ್ಳೆಯ ರೀತಿಯ ತೆಗೆದುಕೊಂಡು ಹೋಗುವ ಕೆಲಸವನ್ನು ಸರ್ಕಾರ ಮಾಡಬೇಕು. ಆದರೆ ಈ ಸರ್ಕಾರ ಹಿಂದುತ್ವ ವಿರೋಧಿ ಎಂದು ದೂರಿದರು.
ಸರ್ಕಾರ ಅಲಿಖಿತ ಕಾನೂನು ಮಾಡಿದೆ. ಎಲ್ಲ ತಾಲ್ಲೂಕು ಮತ್ತು ಜಿಲ್ಲೆಗಳಲ್ಲೂ ಗಣೇಶನ ಉತ್ಸವಕ್ಕೆ ಅವಕಾಶ ಕೋಡಬೇಡಿ ಎಂದು ಪೊಲೀಸ್ ಇಲಾಖೆಗೆ ಸುತ್ತೋಲೆ ಹೊರಡಿಸದೆ ಮಾತಿನಲ್ಲಿ ಹೇಳಿದ್ದಾರೆ ಎಂದು ದೂರಿದರು.
50 ಲಕ್ಷ ರೂ. ಪರಿಹಾರ ಘೋಷಣೆಗೆ ಆಗ್ರಹ
ಹಾಸನ ಜಿಲ್ಲೆಯಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಟ್ರಕ್ ಹರಿದು 8 ರಿಂದ 9 ಜನ ಸಾವಿಗೀಡಾಗಿರುವುದು ಹಾಗೂ ಸುಮಾರು ಜನರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಇರುವ ವಿಚಾರ ತಿಳಿದು ಬಹಳ ನೋವಾಗಿದೆ ಎಂದು ತಿಳಿಸಿದರು. ಈಗಾಗಲೇ ನಮ್ಮ ಪಕ್ಷದ ಮುಖಂಡರಾದ ಆರ್. ಅಶೋಕ್, ಸಿ.ಟಿ. ರವಿ, ಪಕ್ಷದ ನಾಯಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಾರಣಾಂತರದಿಂದ ನಾನು ಹೋಗುವುದಕ್ಕೆ ಆಗಲಿಲ್ಲ ಎಂದು ತಿಳಿಸಿದರು.
ದೇಶದ ಪ್ರಧಾನ ಮಂತ್ರಿಗಳು ಕೂಡ ಹಾಸನ ಜಿಲ್ಲೆಯ ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದಾರೆ ಮತ್ತು ಅವರ ನಿಧಿಯಿಂದ ಹಣವನ್ನು ಘೋಷಣೆ ಮಾಡಿದ್ದಾರೆ. ಇಂತಹ ಅಚಾತುರ್ಯ ನಡೆಯಬಾರದಿತ್ತು. ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ 50 ಲಕ್ಷ ರೂಗಳ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.