ಐಜ್ವಾಲ್, ಸೆ. 13 (DaijiworldNews/AA): ವೋಟ್ ಬ್ಯಾಂಕ್ ರಾಜಕೀಯದಿಂದ ಹಲವು ವರ್ಷಗಳಿಂದ ನಿರ್ಲಕ್ಷಕ್ಕೊಳಗಾಗಿದ್ದ ಭಾರತದ ಈಶಾನ್ಯ ಭಾಗ ಕಳೆದ 11 ವರ್ಷಗಳ ಎನ್ಡಿಎ ಸರ್ಕಾರದ ಆಡಳಿತದಿಂದ ಅಭಿವೃದ್ಧಿಯ ಎಂಜಿನ್ ಆಗಿ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಮೀಜೊರಾಂನಲ್ಲಿ 9 ಸಾವಿರ ಕೋಟಿ ರೂ. ಅಭಿವೃದ್ಧಿ ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, "ಕೇಂದ್ರ ಸರ್ಕಾರದ 'ಆ್ಯಕ್ಟ್ ಈಸ್ಟ್' ಯೋಜನೆ ಮತ್ತು ಕಲಾದನ್ ಮಲ್ಟಿಮಾಡೆಲ್ ಯೋಜನೆ ಮೂಲಕ ಆಗ್ನೇಯ ಭಾರತದೊಂದಿಗೆ ಜೋಡಿಸುವ ಕೆಲಸದಲ್ಲಿ ಮೀಜೋರಾಂ ಪ್ರಮುಖ ಪಾತ್ರ ವಹಿಸಿದೆ. ಬೈರಾಬಿ-ಸಾಯ್ರಂಗ್ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ಈ ಮೂಲಕ ದೇಶದ ರೈಲ್ವೆ ನಕ್ಷೆಗೆ ಮೀಜೊರಾಂ ಸಂಪರ್ಕಗೊಂಡಿದೆ" ಎಂದು ಹೇಳಿದ್ದಾರೆ.
"ಈ ರೈಲ್ವೆ ಸಂಪರ್ಕದಿಂದ ಮೀಜೋರಾಂನ ಶಿಕ್ಷಣ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದೆ. ರಾಜ್ಯದ ಪ್ರವಾಸೋದ್ಯಮ ಬೆಳೆಯಲಿದೆ. ಈ ಭಾಗದಲ್ಲಿ 4,500 ಸ್ಟಾರ್ಟ್ ಅಪ್ಗಳು ಆರಂಭಗೊಂಡಿವೆ. ಉದ್ಯೋಗವಕಾಶ ಹೆಚ್ಚಲಿದೆ. ಇನ್ನೂ ಹೊಸ ಜಿಎಸ್ಟಿಯಿಂದ ಈ ಭಾಗದ ಜನರ ಬದುಕು ಇನ್ನಷ್ಟು ಸುಧಾರಿಸಲಿದೆ. ಅಗತ್ಯ ಔಷಧಗಳು ಎಲ್ಲರಿಗೂ ತಲುಪಲಿದೆ. ವಾಹನಗಳ ಬೆಲೆ ಕಡಿಮೆಯಾಗಲಿದೆ" ಎಂದಿದ್ದಾರೆ.