ಮೈಸೂರು ,ಸೆ. 13 (DaijiworldNews/AK): ವಿರೋಧ ಪಕ್ಷದವರ ಒತ್ತಡದಿಂದ ಪ್ರಧಾನಿಗಳು ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಮೂರು ವರ್ಷಗಳ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಣಿಪುರಕ್ಕೆ ಭೇಟಿ ನೀಡುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದರು. ಗಲಾಟೆ ಆಗುವಾಗ ಭೇಟಿ ನೀಡದೇ, ಪರಿಸ್ಥಿತಿ ಸುಧಾರಿಸಿದ ಮೇಲೆ ಭೇಟಿ ನೀಡುತ್ತಿದ್ದಾರೆ. ಇಷ್ಟು ವರ್ಷ ಯಾಕೆ ಹೋಗಲಿಲ್ಲ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ವಿರೋಧಪಕ್ಷದವರ ಒತ್ತಡದಿಂದ ಈಗ ಭೇಟಿ ನೀಡುತ್ತಿದ್ದಾರೆ ಎಂದರು.
ಧರ್ಮಸ್ಥಳ ಪ್ರಕರಣ: ತನಿಖೆಯಲ್ಲಿ ವಿಳಂಬವಾಗುತ್ತಿಲ್ಲ
ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತನಿಖೆ ವಿಳಂಬವಾಗುತ್ತಿರುವುದರ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ವಿಳಂಬವಾಗುತ್ತಿಲ್ಲ. ಎಸ್ ಐ ಟಿ ತನಿಖೆ ಮಾಡುತ್ತಿದ್ದು ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಹಾಗೆಂದು ಅನಗತ್ಯವಾಗಿ ವಿಳಂಬ ಮಾಡುವಂತಿಲ್ಲ. ನನಗೆ ತಿಳಿದಂತೆ ವಿಳಂಬವಾಗುತ್ತಿಲ್ಲ ಎಂದು ಹೇಳಿದರು.
ದಸರಾ ಒಂದು ಧರ್ಮಕ್ಕೆ ಸೇರಿದ ಕಾರ್ಯಕ್ರಮವಲ್ಲ
ದಸರಾ ಉದ್ಘಾಟಕರ ವಿಚಾರದಲ್ಲಿ ಉದ್ಘಾಟನೆಗೆ ಅವಕಾಶ ಕೊಡಬಾರದು ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕಿರುವ ಬಗ್ಗೆ ಮಾತನಾಡಿ ನ್ಯಾಯಾಲಯದಲ್ಲಿ ವಿಷಯ ಇತ್ಯರ್ಥವಾಗಲಿ ಎಂದರು. ದಸರಾ ಒಂದು ಧರ್ಮಕ್ಕೆ ಸೇರಿದ ಕಾರ್ಯಕ್ರಮವಲ್ಲ. ಸಾಂಸ್ಕೃತಿಕವಾಗಿ ಎಲ್ಲ ಧರ್ಮದ ಜನರು ಇದರಲ್ಲಿ ಭಾಗವಹಿಸುತ್ತಾರೆ. ದಸರಾ ನಾಡಹಬ್ಬವಾಗಿದ್ದು, ಒಂದು ಧರ್ಮದವರು ಮಾತ್ರ ಭಾಗವಹಿಸಬೇಕು ಎಂದೇನೂ ಇಲ್ಲ. ಸಾರ್ವತ್ರಿಕ ಹಬ್ಬದಲ್ಲಿ ಎಲ್ಲ ಜಾತಿ ಮತ್ತು ಧರ್ಮದವರು ಭಾಗವಹಿಸಬಹುದು ಎಂದರು. ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಶಾಂತಿಭಂಗ ಮಾಡುವ ಕೆಲಸ ಮಾಡಿದರೆ ಪೋಲಿಸಿನವರು ಕ್ರಮ ಕೈಗೊಳ್ಳುತ್ತಾರೆ ಎಂದರು.
ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ
ಬಿಜೆಪಿ ನಾಯಕರಾದ ಸಿ.ಟಿ ರವಿ, ಬಸನಗೌಡ ಯತ್ನಾಳ್ ಅವರ ಮೇಲೆ ಎಫ್ಐಆರ್ ದಾಖಲಾಗಿರುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು ಬಿಜೆಪಿಯವರು ಪ್ರಚೋದನಾ ಕಾರಿಯಾದ ಭಾಷಣ ಮಾಡಿದರೆ ಏನು ಮಾಡಬೇಕು? ಶಾಂತಿ ನೆಮ್ಮದಿಯನ್ನು ಕಾಪಾಡುವುದು ಅತ್ಯಂತ ಅವಶ್ಯಕ. ಅದಕ್ಕಾಗಿ ಪ್ರಚೋದನಾಕಾರಿಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇದು ರಾಜಕಾರಣವಲ್ಲ ಎಂದರು.