ನವದೆಹಲಿ, ಸೆ. 12 (DaijiworldNews/AA): ಮಣಿಪುರಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, 8,500 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಮಣಿಪುರದ ಮುಖ್ಯ ಕಾರ್ಯದರ್ಶಿ ಪುನೀತ್ ಕುಮಾರ್ ಗೋಯಲ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಮೊದಲು ಮಿಜೋರಾಂನಿಂದ ಚುರಾಚಂದ್ಪುರಕ್ಕೆ ಆಗಮಿಸಲಿದ್ದಾರೆ. ನಂತರ ಇಂಫಾಲ್ಗೆ ತೆರಳಲಿದ್ದಾರೆ. ಮಣಿಪುರದ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಚುರಾಚಂದ್ಪುರದಲ್ಲಿ 7,300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ" ಎಂದು ಹೇಳಿದರು.
ಜನಾಂಗೀಯ ಹಿಂಸಾಚಾರದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ಚುರಾಚಂದ್ಪುರದಲ್ಲಿ 7,300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ನಂತರ ರಾಜ್ಯ ರಾಜಧಾನಿ ಇಂಫಾಲ್ನಲ್ಲಿ 1,200 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ.
ನಾಳೆ ಮೋದಿ ಅವರು ಮಿಜೋರಾಂನಲ್ಲಿ ತಮ್ಮ ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ. ಅಲ್ಲಿ ಅವರು ಐಜ್ವಾಲ್ನಲ್ಲಿ 9,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಅವರು ಮಣಿಪುರಕ್ಕೆ ತೆರಳಲಿದ್ದಾರೆ. ನಾಳೆ ಸಂಜೆ ಪ್ರಧಾನ ಮಂತ್ರಿ ಮೋದಿ ಗುವಾಹಟಿಯಲ್ಲಿ ನಡೆಯಲಿರುವ ಭಾರತ ರತ್ನ ಡಾ. ಭೂಪೇನ್ ಹಜಾರಿಕಾ ಅವರ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.
ಸೆಪ್ಟೆಂಬರ್ 14ರಂದು ಮೋದಿ ಅಸ್ಸಾಂನಲ್ಲಿ 18,530 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಪ್ರಮುಖ ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸೆಪ್ಟೆಂಬರ್ 15ರಂದು ಅವರು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ 16ನೇ ಸಂಯೋಜಿತ ಕಮಾಂಡರ್ಗಳ ಸಮ್ಮೇಳನ-2025 ಅನ್ನು ಉದ್ಘಾಟಿಸಲಿದ್ದಾರೆ. ನಂತರ ಬಿಹಾರಕ್ಕೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ಮಧ್ಯಾಹ್ನ ಪೂರ್ಣಿಯಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.