ಬೆಂಗಳೂರು, ಸೆ. 11 (DaijiworldNews/TA): ಶಾಸಕರ ಕ್ಷೇತ್ರಗಳಿಗೆ ತಲಾ 50 ಕೋಟಿ ರೂ. ವಿಶೇಷ ಅನುದಾನಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ಬೆಂಗಳೂರು ಶಾಸಕರ ಜೊತೆ ಬುಧವಾರ ಸಭೆ ಮಾಡಿರುವ ಸಿಎಂ ಸಿದ್ದರಾಮಯ್ಯ, ರಸ್ತೆ ದುರಸ್ತಿ, ನೂತನ ರಸ್ತೆ ನಿರ್ಮಾಣಕ್ಕೆ ಅನುದಾನ ಬಳಸುವಂತೆ ಶಾಸಕರಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅನುದಾನ ಹಂಚಿಕೆ ವಿಚಾರವಾಗಿ ಬೆಂಗಳೂರು ಭಾಗದ ಶಾಸಕರೊಂದಿಗೆ ಚರ್ಚೆ ಮಾಡಿದರು. ಈ ವೇಳೆ ಶಾಸಕರ ಕುಂದು ಕೊರತೆಯನ್ನ ಆಲಿಸಿದರು. ಈಗಾಗಲೇ ಮೂರು ಹಂತದಲ್ಲಿ ಸಭೆ ಮಾಡಿದ್ದು, ಶಾಸಕರು, ಪರಿಷತ್ ಸದಸ್ಯರ ಜೊತೆಗೂ ಸಿಎಂ ಮೀಟಿಂಗ್ ಮಾಡಿದರು.
ಈ ಕುರಿತಾಗಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಸಚಿವರು ಹಾಗೂ ಶಾಸಕರ ಜೊತೆ ಸುದೀರ್ಘ ಸಭೆ ನಡೆಸಿ, ಗ್ಯಾರಂಟಿ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿಯ ಮಾಹಿತಿ ಪಡೆದು, ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳ ಬೇಡಿಕೆಯನ್ನು ಆಲಿಸಿ, ಅಗತ್ಯ ಸಹಕಾರ ಹಾಗೂ ಅನುದಾನ ಒದಗಿಸುವುದಾಗಿ ಹೇಳಿದ್ದರು.
ಬೆಂಗಳೂರಿನ ರಸ್ತೆ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಅನುದಾನವನ್ನು ಒದಗಿಸಿ, ಜನರ ಜೀವನಮಟ್ಟ ಸುಧಾರಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಸಿಎಂ ಅವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಿಗೆ 50 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಹಣ ಬಿಡುಗಡೆ ಮಾಡಲು ಕಾಮಗಾರಿ ವಿವರ ನೀಡುವಂತೆ ಎಲ್ಲಾ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಪತ್ರ ಬರೆದಿದ್ದರು ಎನ್ನಲಾಗಿದೆ.