ಬೆಂಗಳೂರು, ಸೆ. 10 (DaijiworldNews/AA): ರಾಜ್ಯದಲ್ಲಿ ಶಾಂತಿ ಕದಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಇದಕ್ಕೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆ ಹೊರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು, ನಮ್ಮ ವಿಪಕ್ಷ ನಾಯಕರು, ನಮ್ಮ ಶಾಸಕ ಮಿತ್ರರ ತಂಡ ಇಂದು ಮದ್ದೂರಿಗೆ ಭೇಟಿ ನೀಡಲಿದ್ದೇವೆ. ಅಲ್ಲಿನ ಪರಿಸ್ಥಿತಿ, ಸತ್ಯಾಸತ್ಯತೆ ಕುರಿತು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇವೆ.ಅಲ್ಲಿ ಹಿಂದೂ ಸಂಘಟನೆಗಳು, ಹಿಂದೂ ಕಾರ್ಯಕರ್ತರಿಗೆ ಧೈರ್ಯ ತುಂಬಲಿದ್ದೇವೆ" ಎಂದರು.
"ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳು ಗಣೇಶನ ಹಬ್ಬವನ್ನು ನೆಮ್ಮದಿಯಿಂದ ಆಚರಿಸಲು ಸಾಧ್ಯ ಇಲ್ಲದಾಗಿದೆ. ಕಾಂಗ್ರೆಸ್ ಸರ್ಕಾರ ಯಾವ ಪರಿಸ್ಥಿತಿಗೆ ನಮ್ಮ ಹಿಂದೂಗಳನ್ನು ತಳ್ಳುತ್ತಿದೆ ಎಂದು ಆಕ್ಷೇಪಿಸಿದರು. ಹಬ್ಬ ಹರಿದಿನವನ್ನು ನೆಮ್ಮದಿಯಿಂದ ಆಚರಿಸಲು ಸಾಧ್ಯ ಇಲ್ಲದ ಸ್ಥಿತಿ ನಿರ್ಮಾಣವಾಗಲು ರಾಜ್ಯ ಸರ್ಕಾರದ ಬೇಜವಾಬ್ದಾರಿಯೇ ಕಾರಣ" ಎಂದು ಟೀಕಿಸಿದರು.
"ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ದುಷ್ಟ ಶಕ್ತಿಗಳಿಂದ ಹಿಂದೂಗಳ ಮೇಲೆ ಕಲ್ಲು ತೂರಾಟ, ಹಿಂದೂ ಕಾರ್ಯಕರ್ತರ ಮೇಲೆ ಅಟ್ಟಹಾಸ ಮೆರೆಯುವಂತಾಗಿದೆ. ಇದಕ್ಕೆ ಪೂರಕ ವಾತಾವರಣವನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡುತ್ತಿದೆ" ಎಂದು ವಾಗ್ದಾಳಿ ನಡೆಸಿದರು.
"ಸಿಎಂಗೆ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸರಿಯಾಗಿ ಇರಬೇಕೆಂಬ ಭಯ ಇಲ್ಲವೇನೋ ಎಂಬ ಆತಂಕ ಜನರಲ್ಲಿ ಮೂಡುತ್ತಿದೆ. ಧರ್ಮಸ್ಥಳದ ವಿಚಾರ, ಚಾಮುಂಡಿ ಬೆಟ್ಟ, ನಿನ್ನೆ ಮದ್ದೂರಿನ ಘಟನೆಗಳು ಇದನ್ನು ಸಾಬೀತುಪಡಿಸುವಂತಿದೆ. ಚಿತ್ರದುರ್ಗದಲ್ಲಿ ಡಿಜೆ, ಮೆರವಣಿಗೆಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿಗಳು ತೀರ್ಮಾನ ಮಾಡಿದ್ದಾಗಿ ಮಾಹಿತಿ ಬರುತ್ತಿವೆ. ಭಜರಂಗದಳದ ಕಾರ್ಯಕರ್ತ ಚಿತ್ರದುರ್ಗಕ್ಕೆ ಬರಬಾರದೆಂದು ಗಡೀಪಾರು ಮಾಡಿದ ವಿಚಾರವೂ ಕೂಡ ಕೇಳಿಸುತ್ತಿದೆ" ಎಂದರು.