ನವದೆಹಲಿ, ಸೆ. 10 (DaijiworldNews/AA): ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ದೆಹಲಿ ಪೊಲೀಸರು, ಜಾರ್ಖಂಡ್ ಭಯೋತ್ಪಾದನಾ ನಿಗ್ರಹ ದಳ ಹಾಗೂ ರಾಂಚಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬೊಕಾರೊ ಮೂಲದ ಆಶರ್ ಡ್ಯಾನಿಶ್ ಪ್ರಮುಖ ಆರೋಪಿಯಾಗಿದ್ದು, ಆತನನ್ನು ರಾಂಚಿಯಲ್ಲಿ ಬಂಧಿಸಲಾಗಿದೆ. ಐಸಿಸ್-ಸಂಬಂಧಿತ ಮಾಡ್ಯೂಲ್ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಘಟಕವು ಆಶರ್ ಡ್ಯಾನಿಶ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಆತನಿಗಾಗಿ ಶೋಧ ನಡೆಸುತ್ತಿತ್ತು.
ಏಕಕಾಲದಲ್ಲಿ ನಡೆಸಿದ ಸಂಘಟಿತ ದಾಳಿಯಲ್ಲಿ ಅಫ್ತಾಬ್ ಎಂಬ ಮತ್ತೊರ್ವ ಶಂಕಿತ ಐಸಿಸ್ ಉಗ್ರನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಬಂಧಿತರು ಐಸಿಸ್ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದರು. ಅಲ್ಲದೇ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.