ದೆಹಲಿ, ಸೆ. 10 (DaijiworldNews/TA): ಹೊಸ ವಾಹನವನ್ನು ಖರೀದಿಸಿದಾಗ ಹಬ್ಬದ ಹರ್ಷ, ಆದರೆ ದೆಹಲಿಯ ನಿರ್ಮಾಣ್ ವಿಹಾರ್ನಲ್ಲಿ ಒಂದು ಅಪರೂಪದ ಘಟನೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಮಹೀಂದ್ರಾ ಥಾರ್ ಕಾರು ಖರೀದಿಸಿದ ಮಹಿಳೆ ಪೂಜೆಗಾಗಿ ನಿಂಬೆಹಣ್ಣಿನ ಮೇಲೆ ಕಾರು ಚಲಾಯಿಸಲು ಯತ್ನಿಸಿದಾಗ, ಆ ಹೊಸ ಕಾರು ನೇರವಾಗಿ ಶೋರೂಮ್ನ ಮೊದಲ ಮಹಡಿಯಿಂದ ಕೆಳಗೆ ಬಿದ್ದು ಭಾರೀ ಅನಾಹುತ ಉಂಟಾದ ಘಟನೆ ನಡೆದಿದೆ.

ಮಾನಿ ಪವಾರ್ ಎಂಬ ಮಹಿಳೆ, ದೆಹಲಿಯ ಮಹೀಂದ್ರಾ ಶೋರೂಮ್ಗೆ ಬಂದು ರೂ.27 ಲಕ್ಷ ಮೌಲ್ಯದ ಥಾರ್ ಕಾರಿನ ಡೆಲಿವರಿ ಪಡೆದಿದ್ದರು. ಸಂಪ್ರದಾಯದಂತೆ ಕಾರಿನ ಮುಂದೆ ನಿಂಬೆಹಣ್ಣನ್ನು ಇಟ್ಟು ಪೂಜೆ ಮಾಡಲು ನಿರ್ಧರಿಸಿದರು. ಆದರೆ ಆ ಸಂದರ್ಭದಲ್ಲೇ ಆಕ್ಸಿಲರೇಟರ್ ಮೇಲೆ ಕಾಲು ಒತ್ತಿದ ಪರಿಣಾಮ, ಕಾರು ನೇರವಾಗಿ ಗಾಜಿನ ತಡೆ ದಾಟಿ ಕೆಳ ಮಹಡಿಗೆ ಬಿದ್ದಿದೆ.
ಕಾರಿನ ಒಳಗೆ ಪವಾರ್ ಜೊತೆಗೆ ಇದ್ದ ವ್ಯಕ್ತಿ ವಿಕಾಸ್ ಇಬ್ಬರೂ ಕೂಡ, ಸಮಯಪ್ರಜ್ಞೆಯಿಂದ ಕಾರಿನ ಡೋರ್ ಗಾಜು ಒಡೆದು ಕೆಳಗೆ ಜಿಗಿದು ಜೀವ ಉಳಿಸಿಕೊಂಡಿದ್ದಾರೆ. ಅವರಿಬ್ಬರಿಗೂ ಗಂಭೀರ ಗಾಯಗಳಾಗಿಲ್ಲ, ಆದರೆ ಘಟನೆಯ ದೃಶ್ಯ ಭೀತಿಕರವಾಗಿತ್ತು ಎನ್ನಲಾಗಿದೆ. ಕಾರಿನ ಮುಂಭಾಗ ಸಂಪೂರ್ಣ ಹಾನಿಗೊಂಡಿದ್ದು, ಶೋರೂಮ್ನ ಒಳಚರಂಡಿ ಹಾಗೂ ಗಾಜಿನ ತಟಗಳು ಸಂಪೂರ್ಣ ಚಿಂಧಿಯಾಗಿವೆ.