ಬೆಂಗಳೂರು, ಸೆ. 10 (DaijiworldNews/TA): ಅಕ್ರಮ ಆನ್ಲೈನ್ ಬೆಟ್ಟಿಂಗ್ ದಂಧೆಯ ಆರೋಪದಲ್ಲಿ ಬಂಧಿತರಾಗಿರುವ ಶಾಸಕ ಕೆ.ಸಿ. ವೀರೇಂದ್ರ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸುತ್ತಿರುವ ತನಿಖೆ ತೀವ್ರತೆಯನ್ನು ಪಡೆದುಕೊಂಡಿದ್ದು, ಇತ್ತೀಚೆಗೆ ಚಳ್ಳಕೆರೆಯಲ್ಲಿ ನಡೆಸಿದ ದಾಳಿಯಲ್ಲಿ ಇ.ಡಿ ಅಧಿಕಾರಿಗಳು ಸುಮಾರು ರೂ. 24 ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಗಟ್ಟಿಗಳನ್ನು ಜಪ್ತಿ ಮಾಡಿದ್ದಾರೆ. ಈ ಜಪ್ತಿಯೊಂದಿಗೆ ಪ್ರಕರಣದಲ್ಲಿ ಇತ್ತೀಚೆಗೆ ವಶಪಡಿಸಿಕೊಳ್ಳಲಾಗಿರುವ ಒಟ್ಟು ಅಕ್ರಮ ಆಸ್ತಿ ಮೌಲ್ಯವು ರೂ.100 ಕೋಟಿಗೂ ಮೀರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್ 6 ರಂದು ಚಳ್ಳಕೆರೆಯಲ್ಲಿ ನಡೆದ ದಾಳಿಯಲ್ಲಿ ಇ.ಡಿ ಅಧಿಕಾರಿಗಳು 21.43 ಕೆಜಿ ತೂಕದ 24 ಕ್ಯಾರೆಟ್ ಚಿನ್ನದ ಗಟ್ಟಿಗಳು, 10.985 ಕೆಜಿ ತೂಕದ ಚಿನ್ನ ಲೇಪಿತ 11 ಬೆಳ್ಳಿ ಗಟ್ಟಿಗಳು ಮತ್ತು ಸುಮಾರು 1 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎಲ್ಲಾ ಮೌಲ್ಯಯುತ ವಸ್ತುಗಳ ಒಟ್ಟು ಮೌಲ್ಯ ರೂ.24 ಕೋಟಿಯಷ್ಟಿದೆ ಎಂಬುದಾಗಿ ಪ್ರಾಥಮಿಕ ಅಂದಾಜು ನೀಡಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿರುವ ಕೆ.ಸಿ. ವೀರೇಂದ್ರ ಅವರನ್ನು ಇ.ಡಿ ತನ್ನ ಕಸ್ಟಡಿಗೆ ಪಡೆದಿದ್ದು, ಸೆಪ್ಟೆಂಬರ್ 4ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರನ್ನು ಇನ್ನೂ ನಾಲ್ಕು ದಿನಗಳ ಕಾಲ ತನಿಖೆಗಾಗಿ ಇ.ಡಿ ಹಸ್ತಾಂತರ ಮಾಡುವಂತೆ ಆದೇಶ ನೀಡಿದೆ. ಈ ಅವಧಿಯಲ್ಲಿ ಇ.ಡಿ ಅಧಿಕಾರಿಗಳು ಅವರು ನಿರ್ವಹಿಸುತ್ತಿದ್ದ ಆನ್ಲೈನ್ ಬೆಟ್ಟಿಂಗ್ ಜಾಲ, ಹಣದ ಹರಿವು, ಪಾವತಿ ಗೇಟ್ವೇ ಬಳಕೆ, ಮ್ಯೂಲ್ ಅಕೌಂಟ್ಗಳು ಮತ್ತು ಇತರ ಆರ್ಥಿಕ ಚಟುವಟಿಕೆಗಳ ಕುರಿತಾಗಿ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ.
ಇ.ಡಿ ತನಿಖೆಯ ಪ್ರಕಾರ, ಶಾಸಕರು ಕಿಂಗ್567, ರಾಜಾ567, ಲಯನ್567, ಪ್ಲೇ567 ಮತ್ತು ಪ್ಲೇವಿನ್567 ಎಂಬಂತಾ ಅನೇಕ ಆನ್ಲೈನ್ ಬೆಟ್ಟಿಂಗ್ ವೆಬ್ಸೈಟ್ಗಳನ್ನು ನಿರ್ವಹಿಸುತ್ತಿದ್ದರು. ಈ ಪ್ಲಾಟ್ಫಾರ್ಮ್ಗಳ ಮೂಲಕ ಸಾವಿರಾರು ಜನರಿಂದ ಹಣ ಸಂಗ್ರಹಿಸಿ, ವಿವಿಧ ಪಾವತಿ ಗೇಟ್ವೇ ಹಾಗೂ ಮ್ಯೂಲ್ ಅಕೌಂಟ್ಗಳ ಮೂಲಕ ಹಣವನ್ನು ತಿರುಗಿಸಲಾಗುತ್ತಿತ್ತು ಎಂದು ವರದಿಯಾಗಿದೆ. ಅಕ್ರಮವಾಗಿ ಸಂಗ್ರಹಿಸಿದ ಈ ಹಣವನ್ನು ಶಾಸಕರು ಹಾಗೂ ಅವರ ಕುಟುಂಬ ಸದಸ್ಯರು ವೈಯಕ್ತಿಕ ಐಷಾರಾಮಿ ಬದುಕು ನಡೆಸಲು ಬಳಸಿದ್ದರು. ಈ ದಂಧೆಯಿಂದ ಸಂಪಾದಿಸಲಾದ ಹಣವನ್ನು ಅಂತಾರಾಷ್ಟ್ರೀಯ ಪ್ರವಾಸಗಳಿಗೆ, ದುಬಾರಿ ಕಾರುಗಳ ಖರೀದಿಗೆ ಹಾಗೂ ವೈಭೋಗ ಜೀವನಕ್ಕೆ ವ್ಯಯಿಸಲಾಗಿದೆ.
ಇವುಗಳ ಜೊತೆಗೆ, ವೀರೇಂದ್ರ ಅವರ ಕುಟುಂಬ ಬಳಸುತ್ತಿದ್ದ ಮರ್ಸಿಡಿಸ್ ಬೆನ್ಸ್ ಜಿಎಲ್ಎಸ್ 400 ಡಿ 4ಮ್ಯಾಟಿಕ್ ಮತ್ತು ರೇಂಜ್ ರೋವರ್ ಸೇರಿದಂತೆ ಹಲವಾರು ಐಷಾರಾಮಿ ವಾಹನಗಳು ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿತವಾಗಿವೆ ಎಂದು ಹೇಳಲಾಗಿದೆ. ಈ ವಾಹನಗಳ ಖರೀದಿಗೂ ಅಕ್ರಮ ಹಣವನ್ನೇ ಬಳಸಲಾಗಿದೆ ಎಂಬುದಾಗಿ ಇ.ಡಿ ತನಿಖೆಯಲ್ಲಿ ಬಹಿರಂಗಗೊಂಡಿದೆ. ಈ ಪ್ರಕರಣದಲ್ಲಿ ಇನ್ನೂ ಹಲವಾರು ಮಾಹಿತಿ ಬಯಲಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.