ಬಾಗಲಕೋಟೆ, ಸೆ. 09 (DaijiworldNews/AA): ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯಲ್ಲಿ ಓರ್ವ ವಿದ್ಯಾರ್ಥಿ ಕಣ್ಣುಗುಡ್ಡೆಯನ್ನೇ ಕಳೆದುಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಢವಳೇಶ್ವರ ಗ್ರಾಮದಲ್ಲಿ ನಡೆದಿದೆ.

ಢವಳೇಶ್ವರ ಗ್ರಾಮದ ಮೊರಬದ ತೋಟದ ವಸತಿ ಶಾಲೆಯಲ್ಲಿ 1ನೇ ಕ್ಲಾಸ್ ಓದುತ್ತಿರುವ ಹಾಗೂ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯ ನಡುವೆ ಪೆನ್ನಿನ ವಿಚಾರಕ್ಕೆ ಗಲಾಟೆಯಾಗಿದೆ. ಈ ವೇಳೆ 1ನೇ ತರಗತಿ ವಿದ್ಯಾರ್ಥಿ ಕಟ್ಟಿಗೆಯಿಂದ 5ನೇ ತರಗತಿ ವಿದ್ಯಾರ್ಥಿಯ ಬಲಗಣ್ಣಿಗೆ ಇರಿದಿದ್ದಾನೆ. ಇದರಿಂದ ತೀವ್ರಗೊಂಡಿರುವ 5ನೇ ತರಗತಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ವೈದ್ಯರು ಕಣ್ಣುಗುಡ್ಡೆಯನ್ನೇ ತೆಗೆದಿದ್ದಾರೆ.
ಒಂದನೇ ತರಗತಿ ವಿದ್ಯಾರ್ಥಿಗೆ ಐದನೇ ತರಗತಿ ವಿದ್ಯಾರ್ಥಿ ಪೆನ್ ನೀಡಿದ್ದ. ಅದನ್ನು ವಾಪಾಸ್ ಕೇಳಿದ್ದಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿಯಾಗಿದ್ದು, ಈ ವೇಳೆ 1ನೇ ತರಗತಿ ವಿದ್ಯಾರ್ಥಿ, ಕಟ್ಟಿಗೆಯಿಂದ 5ನೇ ತರಗತಿ ವಿದ್ಯಾರ್ಥಿ ಕಣ್ಣಿಗೆ ತಿವಿದಿದ್ದಾನೆ. ಇದರಿಂದ ಗಾಯಗೊಂಡ ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಲಗಣ್ಣಿಗೆ ಗಂಭೀರವಾಗಿ ಗಾಯವಾಗಿದ್ದರಿಂದ ವೈದ್ಯರು ಕಣ್ಣು ಗುಡ್ಡೆಯನ್ನೇ ತೆಗೆದಿದ್ದಾರೆ.
ಘಟನೆ ಬಗ್ಗೆ ಮುಖ್ಯ ಶಿಕ್ಷಕಿ, ಅತಿಥಿ ಶಿಕ್ಷಕಿಯ ಗಮನಕ್ಕೆ ತಂದಿದ್ದಾರೆ. ಆದರೆ ಘಟನೆಯನ್ನು ಶಿಕ್ಷಕರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಲಾಗಿದೆ. ಶಿಕ್ಷರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರಗೆ ಮನವಿ ಮಾಡಲಾಗಿದೆ.
ಇನ್ನು ಕಣ್ಣು ಕಳೆದುಕೊಂಡ ವಿದ್ಯಾರ್ಥಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಮನವಿ ಮಾಡಲಾಗಿದೆ. ಸದ್ಯ ಮುಖ್ಯ ಶಿಕ್ಷಕಿ ಹಾಗೂ ಅತಿಥಿ ಶಿಕ್ಷಕಿ ಎಂಬುವವರ ವಿರುದ್ಧ ಮಹಾಲಿಂಗಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.