ಚಾಮರಾಜನಗರ, ಸೆ. 09 (DaijiworldNews/AA): ಹುಲಿ ಸೆರೆಹಿಡಿಯಲು ವಿಫಲರಾದ ಹಿನ್ನೆಲೆ ಅರಣ್ಯ ಇಲಾಖೆಯ ಸಿಬ್ಬಂದಿಯನ್ನೇ ಬೋನಿನಲ್ಲಿ ಕೂಡಿ ಹಾಕಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.

ಬೊಮ್ಮಲಾಪುರ ಗ್ರಾಮದ ಗಂಗಪ್ಪ ಎಂಬವರ ಜಮೀನಿನಲ್ಲಿ ಇರಿಸಿದ್ದ ತುಮಕೂರು ಕೇಜ್ ಗೆ ಅರಣ್ಯ ಇಲಾಖೆ ಗಾರ್ಡ್, ವಾಚರ್ ಸೇರಿ 7 ಮಂದಿ ಸಿಬ್ಬಂದಿಯನ್ನು ಗ್ರಾಮಸ್ಥರು ಬೋನಿನಲ್ಲಿ ಕೂಡಿ ಹಾಕಿದ್ದಾರೆ. ಮೇಲಾಧಿಕಾರಿಗಳು ಬರುವವರೆಗೂ ನಾವು ಈ ಬೋನಿನ ಬಾಗಿಲು ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಗ್ರಾಮದ ಜಮೀನಿನಲ್ಲಿ ಹುಲಿ ಸಂಚಾರವಾಗಿತ್ತು. ಗ್ರಾಮಸ್ಥರ ಒತ್ತಡದ ಬಳಿಕ ಅರಣ್ಯ ಇಲಾಖೆ ಬೋನು ಅಳವಡಿಸಿತ್ತು. ಆದರೆ ಹುಲಿ ಮಾತ್ರ ಬೋನಿಗೆ ಬೀಳಲಿಲ್ಲ. ಈ ಹುಲಿಯಿಂದ ನಮಗೆ ಬಹಳ ಕಷ್ಟವಾಗುತ್ತಿದೆ. ಪ್ರಶ್ನೆ ಕೇಳಿದರೆ ಹುಲಿ ಹಿಡಿಯುತ್ತೇವೆ ಎಂದು ಹೇಳಿ ಏನು ಮಾಡುವುದಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಇನ್ನು ಇಂದು ಅರಣ್ಯ ಇಲಾಖೆ ಸಿಬ್ಬಂದಿ ಬಂದಾಗ ಬೋನಿನ ಒಳಗಡೆ ಕೂಡಿಹಾಕಿ ಪ್ರತಿಭಟಿಸಿದ್ದಾರೆ.