ಬೆಂಗಳೂರು, ಸೆ. 09 (DaijiworldNews/ AK): ಕಾರಿನ ಸನ್ ರೂಫ್ನಲ್ಲಿ ನಿಂತಿದ್ದ ಬಾಲಕನ ತಲೆಗೆ ಹೈ ಬೇರಿಯರ್ ತಗುಲಿದ್ದ ಘಟನೆ ಸಂಬಂಧ ಯಲಹಂಕ ಸಂಚಾರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೆಪ್ಟಂಬರ್ 6 ರ ಮಧ್ಯಾಹ್ನ 1 ಗಂಟೆ ವೇಳೆಗೆ ಬೆಂಗಳೂರಿನ ವಿದ್ಯಾರಣ್ಯಪುರದ 7 ನೇ ಬ್ಲಾಕ್ ಜಿಕೆವಿಕೆ ಡಬಲ್ ರಸ್ತೆಯಲ್ಲಿ ಘಟನೆ ಸಂಭವಿಸಿತ್ತು. ಸದ್ಯ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 125(a) ಮತ್ತು 281 ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ.
ಕಾರಿನ ಸನ್ ರೂಫ್ನಲ್ಲಿ ನಿಂತಿದ್ದ ಬಾಲಕನ ತಲೆಗೆ ಹೈ ಬೇರಿಯರ್ ಬಡಿದಿತ್ತು. ಅದೃಷ್ಟವಶಾತ್, ಕೂದಲೆಳೆ ಅಂತರದಲ್ಲಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದ. ಸದ್ಯ ಪ್ರಕರಣ ದಾಖಲಿಸಿರುವ ಯಲಹಂಕ ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕಾರಿನ ಸನ್ ರೂಫ್ ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡಿದರೆ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 125(A) ಅಡಿ ಶಿಕ್ಷೆ ವಿಧಿಸಲಾಗುತ್ತದೆ. ಗಾಯಗಳು ಉಂಟಾಗಿವೆಯೋ ಅಥವಾ ಇಲ್ಲವೋ ಎಂಬುದರ ಮೇಲೆ ಶಿಕ್ಷೆಯ ಪ್ರಮಾಣ ಅವಲಂಬಿಸಿರುತ್ತದೆ. ಯಾವುದೇ ಗಾಯ ಉಂಟಾಗದಿದ್ದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ, 2,500 ರೂ. ವರೆಗೆ ದಂಡ ಅಥವಾ ಎರಡೂ ವಿಧಿಸಬಹುದಾಗಿದೆ.
ಗಂಭೀರ ಗಾಯವಾದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂ. ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. BNS ಸೆಕ್ಷನ್ 281, ಸಾರ್ವಜನಿಕ ರಸ್ತೆಯಲ್ಲಿ ದುಡುಕಿನ ಅಥವಾ ನಿರ್ಲಕ್ಷ್ಯದ ರೀತಿಯಲ್ಲಿ ವಾಹನ ಚಲಾಯಿಸುವುದನ್ನು ನಿಷೇಧಿಸುತ್ತದೆ. ನಿರ್ಲಕ್ಷ್ಯದ ಚಾಲನೆಯು ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡಬಹುದಾದದ್ದು ಎಂದು ಪರಿಗಣಿಸಲಾಗುತ್ತದೆ. ಅಪಾಯಕಾರಿ ಚಾಲನೆಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ 1,000 ರೂ. ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.