ಬೆಂಗಳೂರು, ಸೆ. 09 (DaijiworldNews/TA): ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸವಲತ್ತುಗಳಿಲ್ಲದೇ ಕಠಿಣ ಪರಿಸ್ಥಿತಿಯಲ್ಲಿ ಕಳೆಯುತ್ತಿದ್ದು, ಅವರು ನ್ಯಾಯಾಧೀಶರ ಎದುರು ಅತಿಶಯ ಆತಂಕದ ಮನವಿಯೊಂದನ್ನು ಸಲ್ಲಿಸಿದ್ದು, ಆ ಮನವಿ ಕೇಳಿದ ನ್ಯಾಯಾಧೀಶರು ಕೂಡ ಒಂದು ಕ್ಷಣ ನಿಶ್ಶಬ್ದರಾಗಿದ್ದರು.

ಮತ್ತೊಮ್ಮೆ ಜೈಲಿಗೆ ಮರಳಿದ ದರ್ಶನ್, ಈ ಬಾರಿ ಯಾವುದೇ ವಿಶೇಷ ಸೌಲಭ್ಯ ಪಡೆಯದಂತೆ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದರಿಂದ, ಅವರು ಸಾಮಾನ್ಯ ಕೈದಿಗಳಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಠಿಣ ನಿಯಮಗಳ ನಡುವೆ ಬದುಕುತ್ತಿದ್ದಾರೆ. ಈ ಸ್ಥಿತಿಯಿಂದಾಗಿ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ತೊಂದರೆ ಅನುಭವಿಸುತ್ತಿರುವ ಬಗ್ಗೆ ನ್ಯಾಯಾಲಯದ ವಿಚಾರಣೆಯಲ್ಲಿ ಬಹಿರಂಗಪಡಿಸಿದರು.
ಬೆಂಗಳೂರು 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ದರ್ಶನ್ ವಿಡಿಯೋ ಕಾಲ್ ಮುಖಾಂತರ ಹಾಜರಾಗಿ, “ಒಂದು ಮನವಿ ಇದೆ,” ಎಂದು ಹೇಳಿ ನ್ಯಾಯಾಧೀಶರ ಗಮನ ಸೆಳೆದರು. “ನಾನು ಬಿಸಿಲು ನೋಡಿ ಈಗಾಗಲೇ 30 ದಿನಗಳಾಗಿವೆ. ಕೈಯಲ್ಲಿ ಫಂಗಸ್ ಬಂದಿದೆ. ನನಗೆ ಬೇರೆ ಯಾವ ಸವಲತ್ತೂ ಬೇಡ, ಕೋರ್ಟ್ ವಿಷ ನೀಡಲಿ,” ಎಂದು ಕೇಳಿಕೊಂಡಿದ್ಧಾರೆ. ಈ ಮಾತು ಕೇಳಿದ ನ್ಯಾಯಾಧೀಶರು, “ಹಾಗೆಲ್ಲ ಕೇಳಬಾರದು,” ಎಂದು ತಕ್ಷಣ ತಿರಸ್ಕಾರ ವ್ಯಕ್ತಪಡಿಸಿದರು. ನಂತರ, ವಿಚಾರಣೆಯನ್ನು 3 ಗಂಟೆಗೆ ಮುಂದೂಡಿದ್ಧಾರೆ.
ದರ್ಶನ್ ಈ ಹಿಂದೆ ಬಂಧನಕ್ಕೊಳಗಾದ ಬಳಿಕ ಹೈಕೋರ್ಟ್ ಜಾಮೀನು ನೀಡಿದರೂ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಆ ಜಾಮೀನು ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್ ಅವರು ಹೊಂದಿದ್ದ ಜಾಮೀನನ್ನು ರದ್ದುಪಡಿಸಿದ್ದು, ವಿಶೇಷ ಸೌಲಭ್ಯ ನೀಡಬಾರದೆಂದು ಸೂಚನೆ ನೀಡಿತ್ತು. ಇದರ ಪರಿಣಾಮವಾಗಿ, ಜೈಲಿನ ಪ್ರತಿಯೊಂದು ನಿಯಮವನ್ನು ಕಠಿಣವಾಗಿ ಅನುಸರಿಸುತ್ತಿರುವ ದರ್ಶನ್, ಇದೀಗ ಜೈಲುವಾಸದಿಂದ ಹೈರಾಣಾಗಿದ್ದಾರೆ.