ಕಾನ್ಪುರ, ಸೆ. 09 (DaijiworldNews/TA): ಮನೆಯಲ್ಲಿ ನಡೆದ ಸಣ್ಣ ಜಗಳವೇ ಮಹತ್ತರವಾದ ದುರಂತಕ್ಕೆ ಕಾರಣವಾಗಬಹುದೆಂಬ ಉದಾಹರಣೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಗಂಡನ ಜಗಳದಿಂದ ಮನನೊಂದು, ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರು, ಮೊಸಳೆ ಕಣ್ಣಿಗೆ ಬಿದ್ದ ಕೂಡಲೇ ಮರ ಹತ್ತಿ ಜೀವ ಉಳಿಸಿಕೊಂಡಿರುವ ಘಟನೆಯು ಗಮನ ಸೆಳೆಯುತ್ತಿದೆ. ಗಂಗಾ ನದಿಯ ನಡುವೆ ಒಂದೊಂದು ಕ್ಷಣವೂ ಜೀವಮರಣದ ಹೋರಾಟವಾಗಿದ್ದ ಈ ಕತೆ, ಕೊನೆಗೆ ಜೀವ ಉಳಿಸೋಕೆ ಪವಾಡವೆಂಬಂತೆ ಭಾಸವಾಗಿತ್ತು.

ಅಹಿರ್ವಾನ್ ನಿವಾಸಿ ಸುರೇಶ್ ಅವರ ಪತ್ನಿ ಮಾಲತಿ ಎಂಬವರು, ಶನಿವಾರ ರಾತ್ರಿ ಗಂಡನೊಂದಿಗೆ ನಡೆದ ಜಗಳದ ಬಳಿಕ ಕೋಪದಿಂದ ಮನೆಯಿಂದ ಹೊರಡುತ್ತಾರೆ. ಆ ದಿನದಂದು ಸುಸ್ತಿನಿಂದಿದ್ದ ಮಾಲತಿಗೆ ಚಹಾ ತಯಾರಿಸುವ ಮನಸ್ಸು ಇಲ್ಲದ ಕಾರಣ, ಗಂಡನಿಗೆ "ನೀವೇ ಮಾಡಿ" ಎಂದಿದ್ದರು. ಈ ಮಾತು, ಒಂದು ದೊಡ್ಡ ಜಗಳಕ್ಕೆ ದಾರಿ ಮಾಡಿಕೊಟ್ಟಿತ್ತು. ಕೋಪದ ಉರಿಯಲ್ಲಿ ಮಾಲತಿ ನೇರವಾಗಿ ಗಂಗಾ ಸೇತುವೆಯವರೆಗೆ ನಡೆದು ಹೋಗಿ, ಆತ್ಮಹತ್ಯೆ ನಿರ್ಧಾರ ಮಾಡಿ ನದಿಗೆ ಹಾರಿ ಬಿಡುತ್ತಾಳೆ.
ಆದರೆ ನೀರಿಗೆ ಬಿದ್ದ ಕೂಡಲೇ ಮಾಲತಿಗೆ ತಾನು ತಪ್ಪು ನಿರ್ಧಾರ ತೆಗೆದುಕೊಂಡಿದ್ದೆಂಬ ಅರಿವು ಬಂದು, ಈಜುತ್ತಾ ದಡ ತಲುಪಲು ಯತ್ನಿಸುತ್ತಿದ್ದರು. ಇಂತಹ ಸಮಯದಲ್ಲಿ ಅವರ ಕಣ್ಣಿಗೆ ಒಂದು ಮೊಸಳೆ ಬೀಳುತ್ತದೆ. ನಿರಾಶೆಯಿಂದ ತುಂಬಿದ ಮನಸ್ಸು ಮತ್ತೆ ಜೀವ ಉಳಿಸಿಕೊಳ್ಳಲು ತಕ್ಷಣ ಬದಿಯಲ್ಲಿದ್ದ ಮರವೊಂದನ್ನು ಹತ್ತುತ್ತಾಳೆ. ಈ ಮರ ಅವರ ಬದುಕಿಗೆ ಆಕಸ್ಮಿಕವಾಗಿ ಆಶ್ರಯವಾಗುತ್ತದೆ. ಇಡೀ ರಾತ್ರಿಯವರೆಗೂ ಆಕೆ ಮರದ ಮೇಲೆ ಕುಳಿತೇ ಇದ್ದಳು ಎನ್ನಲಾಗಿದೆ.
ಬೆಳಿಗ್ಗೆ ಗ್ರಾಮಸ್ಥರು ನದಿಯ ದಡದ ಮೂಲಕ ಹೋಗುತ್ತಿದ್ದಾಗ, ಮಾಲತಿ ಸಹಾಯಕ್ಕಾಗಿ ಕೂಗಿದ ಧ್ವನಿ ಕೇಳಿ ಚಕಿತರಾದರು. ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ವಿನಯ್ ಯಾದವ್ ಹಾಗೂ ಅವರ ತಂಡ ಸ್ಥಳಕ್ಕೆ ತಕ್ಷಣ ಧಾವಿಸಿ, ಮಾಲತಿಯನ್ನು ಸುರಕ್ಷಿತವಾಗಿ ಮರದಿಂದ ಕೆಳಗಿಳಿಸಿದರು. ನಂತರ ಅವರನ್ನು ಠಾಣೆಗೆ ಕರೆತಂದು ಸಮಾಧಾನದ ಮಾತುಗಳಾಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಯಿತು.
ಈ ಘಟನೆ, ನಡವಳಿಕೆಯಲ್ಲಿ ಸಂಯಮ ಕಾಪಾಡುವ ಮಹತ್ವವನ್ನು ಹಾಗೂ ಒಂದು ಕ್ಷಣದ ಕೋಪ ಹೇಗೆ ಅಪಾಯಕ್ಕೆ ದಾರಿ ಮಾಡಬಹುದು ಎಂಬುದನ್ನು ತೋರಿಸುತ್ತದೆ. ಜೊತೆಗೆ, ಪ್ರಕೃತಿಯ ಅಪರೂಪದ ಕ್ರೂರ ಜೀವಿಯಾದ ಮೊಸಳೆಯಿಂದಾಗಿ ಜೀವ ಒಂದು ಜೀವ ಉಳಿಯಿತು ಎಂದೂ ಮಾತುಗಳು ಕೇಳಿ ಬರುತ್ತಿದೆ.