ನವದೆಹಲಿ, ಸೆ. 08 (DaijiworldNews/AK): ಧರ್ಮಸ್ಥಳ ವಿಚಾರವಾಗಿ ಯಾವ ರೀತಿ ಷಡ್ಯಂತ್ರ ನಡೆಯುತ್ತಿದೆ. ಈ ಷಡ್ಯಂತ್ರದ ಹಿಂದೆ ಇರುವವರನ್ನು ರಾಜ್ಯ ಸರ್ಕಾರ ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂಬ ವಿಚಾರವನ್ನು ಮಾನ್ಯ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಜೀ ಅವರು ತಿಳಿಸಿದ್ದೇವೆ. ಎಲ್ಲ ವಿಚಾರಗಳನ್ನು ಅವರು ಆಲಿಸಿದ್ದಾರೆ. ಅವರ ಗಮನಕ್ಕೆ ತರುವ ಕೆಲಸವನ್ನು ಬಿಜೆಪಿ ನಿಯೋಗವು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವರ ಭೇಟಿಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿರೋಧ ಪಕ್ಷದ ನಾಯಕರುಗಳಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಧರ್ಮಸ್ಥಳ ಚಲೋ ಉಸ್ತುವಾರಿ ಹಾಗೂ ಶಾಸಕರಾದ ಎಸ್.ಆರ್. ವಿಶ್ವನಾಥ್, ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ಸತೀಶ್ ಕುಂಪಲ ಅವರನ್ನು ಒಳಗೊಂಡ ಎಲ್ಲ ರಾಜ್ಯ ಬಿಜೆಪಿ ನಿಯೋಗವು ಮಾನ್ಯ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿರುವ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ವಿಚಾರಗಳಾದ ಧರ್ಮಸ್ಥಳ ವಿಚಾರ, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ, ಕೊಪ್ಪಳದಲ್ಲಿ ಹಿಂದೂ ಕಾರ್ಯಕರ್ತ ಗವಿಸಿದ್ದಪ್ಪ ಅವರ ಹತ್ಯೆ, ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ದಿನೇ ದಿನೇ ಹದಗೆಟ್ಟಿರುವುದು ಮತ್ತು ಸಚಿವ ಸಂಪುಟದಲ್ಲಿ ಕೆಲವು ಕೇಸ್ಗಳನ್ನು ರಾಜ್ಯ ಸರ್ಕಾರ ಹಿಂಪಡೆದಿರುವ ಬಗ್ಗೆ ಎಲ್ಲ ವಿಚಾರವಾಗಿ ಮತ್ತು ಸವಿಸ್ತಾರವಾಗಿ ಗೃಹ ಸಚಿವರ ಗಮನಕ್ಕೆ ತಂದು ಚರ್ಚೆಯನ್ನು ಮಾಡಿದ್ದೇವೆ ಎಂದು ವಿವರಿಸಿದರು.
ರಾಜ್ಯದಲ್ಲಿ ಯಾವ ರೀತಿ ಪೊಲೀಸ್ ವ್ಯವಸ್ಥೆಯು ಕುಸಿದು ಬಿದ್ದಿದೆ ಹಾಗೂ ಪೊಲೀಸರಿಗೆ ಯಾವುದೇ ರೀತಿಯ ಅಧಿಕಾರ ಸರ್ಕಾರ ನೀಡದಿರುವ ಬಗ್ಗೆಯೂ ಅಮಿತ್ ಶಾ ಅವರ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದರು.