ಚಂಡೀಗಢ, ಸೆ. 08 (DaijiworldNews/AA): ಕಟ್ಟಡ ಒಂದರಲ್ಲಿ ಎಸಿಯ ಕಂಪ್ರೆಸರ್ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ ನಡೆದಿದೆ. ಈ ದುರಂತದಲ್ಲಿ ಅವರ ಸಾಕು ನಾಯಿ ಕೂಡ ಮೃತಪಟ್ಟಿದೆ.

ಮೃತರನ್ನು ಸಚಿನ್ ಕಪೂರ್, ಅವರ ಪತ್ನಿ ರಿಂಕು ಕಪೂರ್ ಮತ್ತು ಅವರ ಮಗಳು ಸುಜನ್ ಕಪೂರ್ ಎಂದು ಗುರುತಿಸಲಾಗಿದೆ.
ನಾಲ್ಕು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಸೋಮವಾರ ಬೆಳಗಿನ ಜಾವ 1:30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ. ಈ ವೇಳೆ, ಅವರು ವಾಸವಾಗಿದ್ದ ಎರಡನೇ ಮಹಡಿಯಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಅವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮತ್ತೊಂದು ಕೋಣೆಯಲ್ಲಿ ಸಚಿನ್ ಅವರ ಮಗ ಬಚಾವ್ ಆಗಲು ಕಿಟಕಿಯಿಂದ ಹಾರಿದ್ದಾನೆ. ಆತ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಸ್ಫೋಟದ ಶಬ್ಧಕ್ಕೆ ಅಕ್ಕಪಕ್ಕದ ಜನ ಎದ್ದು ಕಟ್ಟಡದಲ್ಲಿದ್ದ ಇತರರನ್ನು ರಕ್ಷಣೆ ಮಾಡಿದ್ದಾರೆ.
ಆ ಕಟ್ಟಡದ ನಾಲ್ಕನೇ ಮಹಡಿಯಲ್ಲಿ 7 ಜನ ವಾಸವಾಗಿದ್ದರು. ಇನ್ನೂ ಮೊದಲನೇ ಮಹಡಿಯನ್ನು ಸಚಿನ್ ಕಪೂರ್ ಕಚೇರಿಯಾಗಿ ಮಾಡಿಕೊಂಡಿದ್ದರು. ಅಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.