ಕಲಬುರಗಿ, ಸೆ. 08 (DaijiworldNews/AA): ಆಳಂದ ಕ್ಷೇತ್ರದಲ್ಲಿ 2023ರಲ್ಲಿ ಮತಗಳ್ಳತನದ ಮೂಲಕ ನನ್ನ ಸೋಲಿಸಲು ಸಂಚು ಮಾಡಲಾಗಿತ್ತು ಎಂದು ಶಾಸಕ ಬಿ.ಆರ್.ಪಾಟೀಲ್ ಆರೋಪಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಬಹಳ ದೊಡ್ಡ ಕಥೆ. ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸುವ ಉದ್ದೇಶದಿಂದ ಮತಗಳ್ಳತನ ನಡೆದಿತ್ತು. ನನ್ನ ಪರವಾಗಿರೋ 6,900 ಮತಗಳನ್ನು ಡಿಲೀಟ್ ಮಾಡಿದ್ದರು. ಈ ವಿಚಾರ ಗೊತ್ತಾಗಿ ನಾನು ಪ್ರಿಯಾಂಕ್ ಖರ್ಗೆ ಸೇರಿ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದೆವು. ಇಬ್ಬರೂ ಸೇರಿ ಪ್ರತಿಭಟನೆ ಮಾಡಿದ ಬಳಿಕ ದೂರು ದಾಖಲಿಸಿಕೊಂಡರು ಎಂದು ಹೇಳಿದರು.
ಚುನಾವಣಾ ಆಯೋಗ ಸಹಕಾರ ನೀಡದ ಹಿನ್ನಲೆ ಆ ಪ್ರಕರಣದ ತನಿಖೆ ಬೇಗ ಮುಗಿಯುತ್ತಿಲ್ಲ. ಈ ಮತಗಳ್ಳತನ ಪ್ರಕರಣ ಕುರಿತು ಕಾಂಗ್ರೆಸ್ ಹೈಕಮಾಂಡ್ ನನ್ನನ್ನು ಬರಲು ಹೇಳಿದೆ. ನನ್ನ ಬಳಿ ಇರೋ ಮಾಹಿತಿ ಪಡೆಯಲು ಹೈಕಮಾಂಡ್ ನನ್ನನ್ನು ಕರೆಸಿಕೊಳ್ಳುತ್ತಿದ್ದು, ನಾಳೆ ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳುತ್ತಿದ್ದೇನೆ. ಅಲ್ಲಿ ಎಲ್ಲಾ ದಾಖಲೆ ಒದಗಿಸುತ್ತೇನೆ. ಅದಾದ ಬಳಿಕ ಹೈಕಮಾಂಡ್ ಸೂಚನೆಯಂತೆ ನಾನು ಮುಂದುವರೆಯುತ್ತೇನೆ ಎಂದಿದ್ದಾರೆ.