ಬೆಂಗಳೂರು,, ಸೆ. 08 (DaijiworldNews/AK):ಮಂಡ್ಯದ ಮದ್ದೂರಿನಲ್ಲಿ ಗಣೇಶೋತ್ಸವ ವೇಳೆ ಗಲಾಟೆ ಮಾಡಿದವರ ಬಂಧನ ಆಗಿದೆ. ಕೆಲವು ಕಡೆ ಸಣ್ಣಪುಟ್ಟ ಘಟನೆ ಆಗಿವೆ. ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದೇವೆ ಎಂದು ಗೃಹಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಗಣೇಶೋತ್ಸವ ವೇಳೆ ಮದ್ದೂರು ಸೇರಿದಂತೆ ಕೆಲವು ಕಡೆ ಕಲ್ಲು ತೂರಾಟ ಪ್ರಕರಣಗಳು ನಡೆದಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಒಂದು ಕಡೆ ಚಿಕ್ಕಮಕ್ಕಳು ಮೆರವಣಿಗೆ ವೇಳೆ ಮೇಲಿಂದ ಉಗಿದಿದ್ದಾರೆ. ಎಲ್ಲವೂ ನಿಯಂತ್ರಣದಲ್ಲಿದೆ. ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದರು.
ಪದೇ ಪದೇ ಈ ಥರ ಘಟನೆಗಳಾಗುತ್ತಿವೆ ಅಂದರೆ ಜನರೂ ಸಹ ಸ್ಪಂದಿಸಬೇಕು. ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಎಲ್ಲ ರೀತಿಯ ಕ್ರಮಗಳನ್ನೂ ಈ ಬಾರಿಯ ಗಣೇಶೋತ್ಸವಗಳ ವೇಳೆ ಕೈಗೊಂಡಿದ್ದೇವೆ. ಸೂಕ್ಷ್ಮ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳೂ ಭೇಟಿ ಕೊಟ್ಟಿದ್ದಾರೆ. ಆದರೂ ಒಂದೆರಡು ಮೂರು ಕಡೆ ಸಣ್ಣಪುಟ್ಟ ಘಟನೆಗಳಾಗಿವೆ, ಕ್ರಮ ತಗೊಂಡಿದ್ದೇವೆ ಎಂದರು. ಬಿಜೆಪಿಯವರು ಆರೋಪ ಮಾಡುತ್ತಾರೆ, ಅವರದ್ದು ಅದೇ ಕೆಲಸ ಎಂದು ಹೇಳಿದರು.
ಧರ್ಮಸ್ಥಳ ಪ್ರಕರಣದ ಕುರಿತು ಮಾತನಾಡಿ, ಎಸ್ಐಟಿ ತನಿಖೆ ನಡೀತಿದೆ, ಮುಗಿಯಲಿ. ಈಗ ನಾವು ಉತ್ತರ ಕೊಡಲು ಬರೋದಿಲ್ಲ. ತನಿಖೆ ಮುಗಿದ ಮೇಲೆ ನೋಡೋಣ. ಯರ್ಯಾರ ಪಾತ್ರ ಇದೆ ಅದೆಲ್ಲವೂ ತನಿಖೆ ಆಗುತ್ತಿದೆ. ಎಲ್ಲವೂ ತನಿಖೆಯಲ್ಲಿ ಅಂತಿಮವಾಗಿ ಹೊರಗೆ ಬರುತ್ತದೆ. ಸೋನಿಯಾ ಗಾಂಧಿ ಅವರಿಗೆ ಕೆಲವರು ಪತ್ರ ಬರೆದಿರೋದು ಗೊತ್ತಿಲ್ಲ. ಎಸ್ಐಟಿ ತನಿಖೆ ನಡೆಯುವಾಗ ನಾನಾಗಲಿ, ಸಿಎಂ ಆಗಲೀ ಯಾರೂ ಹಸ್ತಕ್ಷೇಪ ಮಾಡೋದಿಲ್ಲ ಎಂದು ನುಡಿದರು.