ಬೆಂಗಳೂರು, ಸೆ. 03 (DaijiworldNews/TA): ಚೀನಾದ ಟಿಯಾಂಜಿನ್ನಲ್ಲಿ ನಡೆದ ಎಸ್ಸಿಒ (ಶಾಂಘೈ ಸಹಕಾರ ಸಂಸ್ಥೆ) ಶೃಂಗಸಭೆ ಈ ಬಾರಿ ಭಾರತ, ಚೀನಾ ಮತ್ತು ರಷ್ಯಾ ಸೇರಿದಂತೆ ಪ್ರಮುಖ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಚರ್ಚೆಗಳಿಗೆ ವೇದಿಕೆಯಾಗಿದ್ದು, ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ಚೀನಾದ ಪ್ರವಾಸ ದೇಶ-ವಿದೇಶಗಳಲ್ಲಿ ಗಮನಸೆಳೆದಿದೆ. ಈ ಪ್ರವಾಸದ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪತ್ರ ಬರೆದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಪತ್ರದಲ್ಲಿ ದೇವೇಗೌಡರು, “ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರೇ, ನಿಮ್ಮ ಚೀನಾ ಪ್ರವಾಸವನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಭಾರತದ ಮೇಲೆ ಅಮೆರಿಕ ಹೇರುತ್ತಿರುವ ಸುಂಕ ಯುದ್ಧಕ್ಕೆ ಪರ್ಯಾಯ ಮಾರ್ಗ ಹುಡುಕುತ್ತಿರುವ ನಿಮ್ಮ ಪ್ರಯತ್ನ ಪ್ರಶಂಸನೀಯ. ಈ ಕಾರಣಕ್ಕಾಗಿ ಭಾರತದ ಲಕ್ಷಾಂತರ ಜನರು ನಿಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ,” ಎಂದು ಅವರು ಹೇಳಿದ್ದಾರೆ.
ಅಲ್ಲದೇ, ರಷ್ಯಾ ಮತ್ತು ಚೀನಾ ರಾಷ್ಟ್ರಗಳ ಅಧ್ಯಕ್ಷರ ಜೊತೆ ಮೋದಿ ಹೊಂದಿರುವ ಸ್ನೇಹಜಾಲವು ಜಗತ್ತಿಗೆ ಹೊಸ ಸಂದೇಶ ನೀಡಿದೆ ಎಂದು ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ. ಉಕ್ರೇನ್ ಯುದ್ಧ ಮುಕ್ತಾಯದ ಕುರಿತು ಅಧ್ಯಕ್ಷ ಪುಟಿನ್ ಅವರೊಂದಿಗೆ ನಡೆಸಿದ ಚರ್ಚೆಯನ್ನು ಅವರು ಶ್ಲಾಘಿಸಿದ್ದು, “ನೀವು ಅನುಸರಿಸುತ್ತಿರುವ ನೀತಿಗಳು ಸಮೃದ್ಧ ಭಾರತ ನಿರ್ಮಾಣಕ್ಕೆ ದಾರಿ ಹಾಕಲಿವೆ,” ಎಂದು ತಿಳಿಸಿದ್ದಾರೆ.
ಮುಂದುವರೆದು ಅವರು, “ಧರ್ಮ ನಮ್ಮ ಕಡೆಗಿದೆ ಮತ್ತು ಭಾರತವು ಜಗತ್ತಿನಲ್ಲಿ ಯಾವುದೇ ದೇಶ ಹೊಂದದಂತಹ ಆರ್ಥಿಕ, ಜನಸಂಖ್ಯಾ ಹಾಗೂ ಪ್ರಜಾಪ್ರಭುತ್ವದ ಶಕ್ತಿಯ ಸಮನ್ವಯವನ್ನು ಹೊಂದಿರುವ ರಾಷ್ಟ್ರವಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಕೂಡ ತನ್ನ ನಿಲುವನ್ನು ಮರುಪರಿಶೀಲಿಸಲು ಒತ್ತಾಯಿತವಾಗುತ್ತದೆ,” ಎಂದು ಹೇಳಿದ್ದಾರೆ.
ಅಧ್ಯಕ್ಷ ಪುಟಿನ್ ಮತ್ತು ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗಿನ ಪ್ರಧಾನಿ ಮೋದಿಯ ಛಾಯಾಚಿತ್ರಗಳು ಮತ್ತು ವಿಡಿಯೋಗಳು ಜಾಗತಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ರಾಷ್ಟ್ರ ನಾಯಕರ ನಡುವಿನ ಬಲಿಷ್ಠ ಸ್ನೇಹವನ್ನು ಪ್ರತಿಬಿಂಬಿಸುತ್ತಿವೆ. ಇದು ಜಾಗತಿಕ ಶಾಂತಿ ಮತ್ತು ಸಮೃದ್ಧಿಯ ಹೊಸ ಯುಗದ ಆರಂಭಕ್ಕೆ ಸಂಕೇತವಾಗುತ್ತದೆ ಎಂದು ದೇವೇಗೌಡರು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪತ್ರದ ಅಂತ್ಯದಲ್ಲಿ ದೇವೇಗೌಡರು, “ಭಾರತದ ಮುಂದಿರುವ ಸವಾಲುಗಳನ್ನು ನೀವು ಯಾವುದೇ ಮೂಲ ಮೌಲ್ಯಗಳನ್ನು ತ್ಯಜಿಸದೇ ಅವಕಾಶಗಳಾಗಿ ಪರಿವರ್ತಿಸುತ್ತಿರುವ ನಿಮ್ಮ ದೃಢ ಸಂಕಲ್ಪ ಪ್ರಶಂಸನೀಯ. ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಶಕ್ತಿ ನೀಡಲಿ,” ಎಂದು ಹಾರೈಸಿದ್ದಾರೆ.