ಮೈಸೂರು,ಸೆ. 01 (DaijiworldNews/AK): ಮಗು ಹೊಟ್ಟೆಯಲ್ಲಿರುವಾಗಲೇ ಮಗುವಿನ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ನಿಜಕ್ಕೂ ದೊಡ್ಡ ಸಾಧನೆ. ಇದಕ್ಕಾಗಿ ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆ ಅಭಿನಂದನೀಯವಾಗಿದೆ ಎಂದು ಸಿ.ಎಂ.ಸಿದ್ದರಾಮಯ್ಯ ನುಡಿದರು.

ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ (ಆಯಿಷ್) ಮೈಸೂರು ಇವರ ವತಿಯಿಂದ ಆಯೋಜಿಸಿದ್ದ ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯ“ವಜ್ರ ಮಹೋತ್ಸವ ಕಾರ್ಯಕ್ರಮ”ದಲ್ಲಿ ಮಾತನಾಡಿದರು. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮತ್ತು ಪ್ರಗತಿ ಕಾಣಬೇಕಾಗಿದೆ. ಇದಕ್ಕಾಗಿ ನಮ್ಮ ಸರ್ಕಾರ ಈಗಾಗಲೇ 10 ಎಕರೆ ಜಾಗ ಒದಗಿಸಿದೆ. ಇಷ್ಟಲ್ಲದೆ ಅಗತ್ಯ ಇರುವ ಎಲ್ಲಾ ನೆರವನ್ನೂ ಒದಗಿಸಲು ನಾವು ಸಿದ್ದರಿದ್ದೇವೆ ಎಂದು ಭರವಸೆ ನೀಡಿದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯು (AIISH), ವಾಕ್ ಮತ್ತು ಶ್ರವಣ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಏಷ್ಯಾದ ಅತ್ಯುತ್ತಮ ಸಂಸ್ಥೆಗಳಲ್ಲೊಂದಾಗಿರುವುದು ನಮ್ಮ ಜಿಲ್ಲೆಯ ಮತ್ತು ರಾಜ್ಯದ ಹೆಮ್ಮೆ. ಧ್ವನಿಯಿಲ್ಲದವರಿಗೆ ಧ್ವನಿಯಾಗಿರುವ, ಕಿವಿ ಕೇಳದೆ ಮೌನವಾಗಿರುವವರಿಗೆ ಮಾತಿನ ಚೈತನ್ಯ ತುಂಬಿರುವ ಇಂಥ ಸಂಸ್ಥೆಯು ಮೈಸೂರಿನಲ್ಲಿರುವುದು ಹಾಗೂ ವಜ್ರ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಮನುಷ್ಯರಿಗೆ ದೇಹದ ಎಲ್ಲಾ ಅಂಗಗಳು ಮುಖ್ಯವಾದರೂ ಕಣ್ಣು, ಕಿವಿಗಳು ಅತಿ ಮುಖ್ಯವಾದ ಅಂಗಗಳಾಗಿವೆ. ದೃಷ್ಟಿ ಮತ್ತು ಶಬ್ಧಗಳ ಗ್ರಹಿಕೆಯು ಮನುಷ್ಯರ ಮಾತುಗಳನ್ನು ರೂಪಿಸುತ್ತವೆ ಹಾಗೂ ನಿಯಂತ್ರಿಸುತ್ತವೆ. 2011 ರ ರಾಷ್ಟ್ರೀಯ ಜನಗಣತಿಯ ಪ್ರಕಾರ ರಾಜ್ಯದಲ್ಲಿ 3.3 ಲಕ್ಷ ಜನರು ಮಾತು ಬಾರದವರು ಹಾಗೂ ಕಿವಿ ಕೇಳಿಸದವರಿದ್ದಾರೆ. ಶೇ.0.5 ರಷ್ಟಿರುವ ಈ ಅಸಹಾಯಕರು ನಮಗೆ ಅಂಕಿ ಸಂಖ್ಯೆಗಳಲ್ಲ, ಜೀವಂತ ಮನುಷ್ಯರ ನಿರಂತರ ಕಷ್ಟದ ಉದಾಹರಣೆಗಳು. ಹಾಗಾಗಿ ಈ ಸಮಸ್ಯೆಯಿರುವವರನ್ನು ಅತ್ಯಂತ ಎಚ್ಚರಿಕೆಯಿಂದ ಕಾಪಾಡಿಕೊಳ್ಳುವುದು ನಾಗರಿಕ ಸಮಾಜದ ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
1966ರಲ್ಲಿ ಮೈಸೂರಿನಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ವಾಕ್ ಮತ್ತು ಶ್ರವಣ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಶೋಧನೆ, ಚಿಕಿತ್ಸೆ, ಪುನರ್ವಸತಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಒದಗಿಸುತ್ತಿರುವ ಮಹತ್ವದ ರಾಷ್ಟ್ರೀಯ ಸಂಸ್ಥೆಯಾಗಿದೆ ಎಂದರು.
ರಾಷ್ಟ್ರೀಯ ಮತ್ತು ಅಂತರಾಷ್ಟ್ರಿಯ ಮನ್ನಣೆಯನ್ನು ಗಳಿಸಿರುವ ಈ ಸಂಸ್ಥೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು Centre of Excellence ಎಂದು ಗುರುತಿಸಿದ್ದರೆ, ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು Science and Technology Institute ಎಂದು ಗುರುತಿಸಿರುವುದನ್ನು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.