ಬೆಂಗಳೂರು, ಸೆ. 01 (DaijiworldNews/AA): ಕನ್ನಡ ಪರವಾಗಿ ಬಾನು ಮುಷ್ತಾಕ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಬಾನು ಮುಷ್ತಾಕ್ ಅವರ ಸಾಧನೆ ನೋಡಿ ಮೆಚ್ಚಿ ನಾವು ಉದ್ಘಾಟನೆಗೆ ಕರೆಸಿದ್ದೇವೆ. ಅದರಲ್ಲಿ ತಪ್ಪೇನಿದೆ. ಬಿಜೆಪಿ ಅವರು ಯಾರಾದ್ರು ಒಬ್ಬರು ಹೋಗಿ ಬೂಕರ್ ಪ್ರಶಸ್ತಿ ತರಲಿ ನೋಡೋಣ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ಬಿಜೆಪಿ ನಾಯಕರ ವಿರೋಧ ವಿಚಾರವಾಗಿ ಮಾತನಾಡಿದ ಅವರು, "ಈ ಬಗ್ಗೆ ಮಾಜಿ ಸಂಸದರು, ಮಾಜಿ ಬಿಜೆಪಿ ಶಾಸಕರು ನಡೆಯಲಾರದ ನಾಣ್ಯಗಳು ಚಾಲ್ತಿಯಲ್ಲಿ ಬರೋಕೆ ಹೀಗೆ ಮಾತಾಡ್ತಿದ್ದಾರೆ. ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿಲ್ಲವಾ? ಬಿಜೆಪಿ ಸರ್ಕಾರ ಇದ್ದಾಗ ಅಬ್ದುಲ್ ಕಲಾಂ ಅವರನ್ನ ದಸರಾಗೆ ಕರೆದಿದ್ದರು. ಅವರು ಬಂದಿರಲಿಲ್ಲ. ಕಲಾಂ, ನಿಸಾರ್ ಅಹಮದ್ ಮುಸ್ಲಿಮರು ಅಂತ ಅವರನ್ನ ಕರೆಸಿದ್ದಾ? ಅವರ ಕೊಡುಗೆ, ಸಾಮರ್ಥ್ಯ ನೋಡಿ ಕರೆಸಿದ್ದಾ? ನಮ್ಮ ನಾಡಿಗೆ ಅವರು ಕೊಡುಗೆ ಕೊಟ್ಟಿರಲಿಲ್ಲವಾ?" ಎಂದು ಕೇಳಿದರು.
"ಟಿಪ್ಪು, ಹೈದರ್ ಅಲಿ ಇದ್ದಾಗಲು ದಸರಾ ನಡೆದಿತ್ತು. ನಿಂತಿರಲಿಲ್ಲ. ತಾಯಿ ಚಾಮುಂಡಿಯೇ ಏನು ಮಾತಾಡಲ್ಲ. ಇವರೇ ಚಾಮುಂಡೇಶ್ವರಿ ವಕ್ತಾರರ ತರಹ ಮಾತಾಡ್ತಾರೆ. ಯಾರು ಇವರೆಲ್ಲ ಮಾತಾಡೋಕೆ? ಬಿಜೆಪಿ ಅವರ ಕೊಡುಗೆ ಶೂನ್ಯ. ಕರ್ನಾಟಕ, ಭಾಷೆ, ನಾಡಿಗೆ ಕೊಡುಗೆ ಕೊಟ್ಟಿರೋರು ಉದ್ಘಾಟನೆ ಮಾಡಬಾರದು ಅಂದರೆ ಹೇಗೆ? ಇದು ಬಿಜೆಪಿ ಅವರ ರಾಜಕೀಯ ಅಷ್ಟೇ. ಇವರಿಗೆ ಕೆಲಸ ಇಲ್ಲ. ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಹೀಗೆ ಮಾತಾಡ್ತಿದ್ದಾರೆ ಅಷ್ಟೆ. ಮಾಜಿ ಸಂಸದರಿಗೆ ಏನು ಇದರಲ್ಲಿ ಅಷ್ಟು ಕಳಕಳಿ" ಎಂದು ಪ್ರಶ್ನಿಸಿದರು.