ನವದೆಹಲಿ, ಆ. 29 (DaijiworldNews/AK):ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಜಿಎಸ್ಟಿ ಸರಳೀಕರಣ ವ್ಯವಸ್ಥೆಯಿಂದ ರಾಜ್ಯಗಳ ಆದಾಯ 85,000 ಕೋಟಿಯಿಂದ 2.5 ಲಕ್ಷ ಕೋಟಿ ವರೆಗೆ ನಷ್ಟ ಉಂಟಾಗಲಿದ್ದು, ಜಿಎಸ್ಟಿ ಸ್ಥಿರಗೊಳ್ಳುವವರೆಗೆ ಜಿಎಸ್ಟಿ ಕೌನ್ಸಿಲ್ ನಷ್ಟ ಪರಿಹಾರ ನೀಡಲಿ ಎಂದು ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದರು.

ಜಿಎಸ್ಟಿ ಸರಳೀಕರಣ ಹಾಗೂ ರಾಜ್ಯಗಳ ಸ್ವಾಯತ್ತತೆಗೆ ಸಂಬಂಧಿಸಿ ಶುಕ್ರವಾರ ದೆಹಲಿಯ ಕರ್ನಾಟಕ ಭವನದಲ್ಲಿ ಸಮಾನ ಮನಸ್ಕ ಎಂಟು ರಾಜ್ಯಗಳ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ತೆಲಂಗಾಣ ರಾಜ್ಯದ ಹಣಕಾಸು ಸಚಿವ ತಂಗಮ್ ತೆನ್ನರಸು, ಹಿಮಾಚಲ ಪ್ರದೇಶದ ಹಣಕಾಸು ಸಚಿವ ರಾಜೇಶ್ ಧರ್ಮನಿ, ಜಾರ್ಖಂಡ್ ಹಣಕಾಸು ಸಚಿವ ರಾಧಾ ಕೃಷ್ಣ ಕಿಶೋರ್, ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ, ಕೇರಳ ಹಣಕಾಸು ಸಚಿವ ಬಾಲಗೋಪಾಲ್, ತೆಲಂಗಾಣ ಹಣಕಾಸು ಸಚಿವ ಮಲ್ಲು ಭಟ್ಟಿ ವಿಕ್ರಮಾರ್ಕ, ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ವಲಯ ಅಧಿಕಾರಿ ಉಜ್ಜೈನಿ ದತ್ತ ಪಾಲ್ಗೊಂಡಿದ್ದರು.
ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಜಿಎಸ್ಟಿ ಕೌನ್ಸಿಲ್ ನಮ್ಮ ಮುಂದಿಟ್ಟಿರುವ ಜಿಎಸ್ಟಿ ತೆರಿಗೆ ಸರಳೀಕರಣ ವ್ಯವಸ್ಥೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಈ ವ್ಯವಸ್ಥೆ ರಾಜ್ಯಗಳ ತೆರಿಗೆ ಆದಾಯವನ್ನು ರಕ್ಷಿಸುವಂತಿರಬೇಕು ಹಾಗೂ ಇದರ ಸಂಪೂರ್ಣ ಲಾಭ ದೇಶದ ಜನಸಾಮಾನ್ಯರಿಗೆ ಸಿಗುವಂತಿರಬೇಕೇ ಹೊರತು ಕೆಲವು ಕಂಪನಿಗಳಿಗೆ ಮಾತ್ರ ಲಾಭ ಆಗುವಂತಿರಬಾರದು ಎಂದು ಅಭಿಪ್ರಾಯಪಟ್ಟರು.