ನವದೆಹಲಿ, ಆ. 29 (DaijiworldNews/AA): ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ವ್ಯಾಪಕ ನೀರು ನಿಂತಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಅಲ್ಲದೇ ದೆಹಲಿ ವಿಮಾನ ನಿಲ್ದಾಣದಲ್ಲಿಯೂ ವಿಮಾನಗಳ ಕಾರ್ಯಾಚರಣೆಯಲ್ಲಿ ಸಮಸ್ಯೆಯುಂಟಾಗಿ ನಿರ್ಗಮನ ಮತ್ತು ಆಗಮನದಲ್ಲಿ ವಿಳಂಬವಾಗಿದೆ.

ನಿರಂತರ ಮಳೆಯ ಹಿನ್ನೆಲೆ ನೋಯ್ಡಾ ಮತ್ತು ಗಾಜಿಯಾಬಾದ್ಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಿಂದಾಗಿ ಪ್ರಗತಿ ಮೈದಾನ, ಡಿಫೆನ್ಸ್ ಕಾಲೋನಿ ಮತ್ತು ಪ್ರೀತ್ ವಿಹಾರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವ್ಯಾಪಕ ಜಲಾವೃತ ಮತ್ತು ಸಂಚಾರ ದಟ್ಟಣೆ ಉಂಟಾಗಿದೆ.
ರಾಜಧಾನಿಯ ಹಲವಾರು ಪ್ರಮುಖ ಮಾರ್ಗಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಡಿಎನ್ಡಿ ಫ್ಲೈವೇ, ಮಥುರಾ ರಸ್ತೆ, ವಿಕಾಸ್ ಮಾರ್ಗ, ಐಎಸ್ಬಿಟಿ, ಗೀತಾ ಕಾಲೋನಿ ಮತ್ತು ರಾಜಾರಾಮ್ ಕೊಹ್ಲಿ ಮಾರ್ಗ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಂಚಾರ ನಿಧಾನಗತಿಯಲ್ಲಿ ಸಾಗಿತು.