ಬೆಂಗಳೂರು,ಆ. 22 (DaijiworldNews/ AK): ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ದೂರುದಾರನಿಗೆ ಮಾಸ್ಕ್ ಹಾಕಿಸಿದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಇದೀಗ ತಾವೇ ಮುಖವಾಡ ಹಾಕಿ ಓಡಾಡುವ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗುಂಡಿಗಳಲ್ಲಿ ಏನೂ ಸಿಕ್ಕದೇ ಈಗ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಆತಂಕದಲ್ಲಿದ್ದಾರೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ದೂರುದಾರನಿಗೆ ಮುಖವಾಡ ಹಾಕುವ ನಿರ್ಧಾರ ಮಾಡಿದ್ದರು. ದೂರುದಾರನ ಮುಖವಾಡವೂ ಕಳಚಿಬಿದ್ದಿದೆ ಎಂದು ಹೇಳಿದರು.
ಧರ್ಮಸ್ಥಳದ ವಿಚಾರವಾಗಿ ಬಿಜೆಪಿ ನಮ್ಮ ಹೋರಾಟವನ್ನು ಈಗಾಗಲೇ ಘೋಷಿಸಿದೆ; ‘ಧರ್ಮ ರಕ್ಷಣೆಗಾಗಿ ಧರ್ಮ ಯುದ್ಧ’ ನಡೆಸಲಿದ್ದೇವೆ ಎಂದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ರಾಜ್ಯ ಸರಕಾರದ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂದರೆ, ಪಾಪ ಸಿದ್ದರಾಮಯ್ಯನವರು ಯಾರೋ ಎಡಪಂಥೀಯ ಶಕ್ತಿಗಳ ಒತ್ತಡಕ್ಕೆ ಮಣಿದು ಧರ್ಮಸ್ಥಳದಲ್ಲಿ ಎಸ್ಐಟಿ ತನಿಖೆಗೆ ಆದೇಶಿಸಿದರು. ನಾವೂ ಅದನ್ನು ಸ್ವಾಗತ ಮಾಡಿದ್ದೆವು. ಗುಂಡಿ ಬಗೆದಂತೆ ಏನೋ ಸಿಕ್ಕುವುದಾಗಿ ವಿಧಾನಸೌಧದಲ್ಲಿ ಕುಳಿತು ಸಿದ್ದರಾಮಯ್ಯನವರು ಕನಸು ಕಾಣುತ್ತಿದ್ದರು. 15- 16 ಗುಂಡಿ ತೋಡಿದರೂ ಧರ್ಮಸ್ಥಳದಲ್ಲಿ ಏನೂ ಸಿಕ್ಕಿಲ್ಲ ಎಂದು ವಿವರಿಸಿದರು.
ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅವಿವೇಕತನದಿಂದ ನಡೆದುಕೊಳ್ಳುತ್ತಿದೆ. ಆ ದೂರುದಾರ, ಆತನ ಹಿಂದಿರುವ ದುಷ್ಟ ಶಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರಗಳು ನಡೆಯುತ್ತಿವೆ. ಹಿಂದೂ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಪೋಸ್ಟ್ ಮಾಡಿದರೆ, 24 ಗಂಟೆಯಲ್ಲಿ ಅವರನ್ನು ಬಂಧಿಸುತ್ತಾರೆ ಎಂದು ಆಕ್ಷೇಪಿಸಿದರು.