ಬೆಂಗಳೂರು, ಆ. 22 (DaijiworldNews/AA): ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡವರಿಗೆ ಕಳೆದ ವರ್ಷದಂತೆಯೇ ಈ ವರ್ಷ ಕೂಡ ಸಂಚಾರ ಪೊಲೀಸರು ಶೇ. 50 ರ ರಿಯಾಯಿತಿ ಘೋಷಿಸಿದ್ದಾರೆ. ಒಂದು ಬಾರಿಯ ರಿಯಾಯಿತಿ ಇದಾಗಿದ್ದು, ಆಗಸ್ಟ್ 23 ರಿಂದ ಸೆಪ್ಟೆಂಬರ್ 12 ರ ವರೆಗೆ ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ

ಈ ಆಫರ್ 2023 ರ ಫೆಬ್ರವರಿ 11 ರವರೆಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗಲಿದೆ. ಕಳೆದ ವರ್ಷದಂತೆ ಈ ಬಾರಿ ಕೂಡ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ರಿಯಾಯಿತಿಯೊಂದಿಗೆ ದಂಡ ಪಾವತಿಸುವ ನಿರೀಕ್ಷೆ ಇದೆ.
ರಾಜ್ಯ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಪುಷ್ಪಾ ವಿ.ಎಸ್. ಅವರು ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಯೋಜನೆ ಸೆಪ್ಟೆಂಬರ್ 12 ರವರೆಗೆ ಜಾರಿಯಲ್ಲಿರುತ್ತದೆ. 2023ರ ಫೆಬ್ರವರಿ 11 ರವರೆಗೆ ಪೊಲೀಸ್ ಇಲಾಖೆಯ ಇ-ಚಲನ್ ವ್ಯವಸ್ಥೆಯಲ್ಲಿ ದಾಖಲಾದ ಪ್ರಕರಣಗಳಿಗೆ ಮಾತ್ರ ರಿಯಾಯಿತಿ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಕರ್ನಾಟಕ ಸ್ಟೇಟ್ ಪೊಲೀಸ್ (ಕೆಎಸ್ಪಿ) ಆ್ಯಪ್, ಬಿಟಿಪಿ ಅಸ್ತ್ರಂ ಆ್ಯಪ್ ಮುಖಾಂತರ ರಿಯಾಯಿತಿ ದರದಲ್ಲಿ ದಂಡ ಪಾವತಿಸಬಹುದಾಗಿದೆ. ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ದಂಡವನ್ನು ಪಾವತಿಸಬಹುದಾಗಿದೆ. ಅಲ್ಲದೆ, ಅಲ್ಲಲ್ಲಿ ಇರುವ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಪಾವತಿಸಬಹುದಾಗಿದೆ. ಕರ್ನಾಟಕ ಒನ್/ಬೆಂಗಳೂರು ಒನ್ ವೆಬ್ಸೈಟ್ನಲ್ಲಿ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.